ಸಾಲದ ಕಂತಿನ ಚಿಂತೆಬಿಡಿ: ಕರೊನಾಘಾತದಿಂದ 3 ತಿಂಗಳು ನಿರಾಳ, ಆರ್ಥಿಕತೆಗೆ ಆರ್​ಬಿಐ ಆಕ್ಸಿಜನ್

RBI
Published on

ನವದೆಹಲಿ: ಕರೊನಾಘಾತ ಅನುಭವಿಸುತ್ತಿರುವ ದೇಶಕ್ಕೆ ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಿಸಿದ ಮರುದಿನವೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕೂಡ ಭರ್ಜರಿ ಉಡುಗೊರೆ ನೀಡಿದೆ. ಲಾಕ್​ಡೌನ್ ಪರಿಣಾಮ ವ್ಯಾಪಾರ, ವಹಿವಾಟು ಸ್ಥಗಿತವಾಗಿ ದೇಶಾದ್ಯಂತ ಆರ್ಥಿಕ ಹಿನ್ನಡೆ ತೀವ್ರಗೊಂಡಿರುವುದರಿಂದ ಮತ್ತು ಅಸಂಘಟಿತ ವಲಯದ ಕಾರ್ವಿುಕರಿಗೆ ನಿತ್ಯದ ಜೀವನವೇ ದುರ್ಭರವಾಗಿರುವ ಹಿನ್ನೆಲೆಯಲ್ಲಿ, ಬ್ಯಾಂಕಿನಿಂದ ಪಡೆದಿರುವಂತಹ ಎಲ್ಲ ರೀತಿಯ ಸಾಲಗಳ ಮಾಸಿಕ ಕಂತು (ಇಎಂಐ) ಪಾವತಿಗೆ ಮೂರು ತಿಂಗಳ ವಿನಾಯಿತಿಯನ್ನು ಆರ್​ಬಿಐ ಘೋಷಿಸಿದೆ.

ಜತೆಗೆ, ಸಾಲದ ಮೇಲಿನ ಬಡ್ಡಿ ದರದಲ್ಲಿ 75 ಮೂಲಾಂಶ (75 ಪೈಸೆ) ಕಡಿಮೆ ಮಾಡಲಾಗಿದ್ದು, ಇದರಿಂದ ರೆಪೊ ದರ ಶೇ. 4.40ಕ್ಕೆ ಇಳಿದಿದೆ. ರಿವರ್ಸ್ ರೆಪೊದಲ್ಲಿ 90 ಮೂಲಾಂಶ ಕಡಿತಗೊಳಿಸಿ ಶೇ. 4ಕ್ಕೆ ತಗ್ಗಿಸಲಾಗಿದೆ. 2018ರ ಫೆಬ್ರವರಿಯಿಂದ ಈವರೆಗೆ ಒಟ್ಟಾರೆ 210 ಮೂಲಾಂಶ (-ಠಿ; 2.10) ಕಡಿತಗೊಂಡಿದೆ. 2019-20ರೕ ನಾಲ್ಕನೇ ತ್ರೖೆಮಾಸಿಕದಲ್ಲಿ ಒಟ್ಟು ದೇಶಿಯ ಉತ್ಪನ್ನ ದರವನ್ನು (ಜಿಡಿಪಿ) ಶೇ. 4.7ಕ್ಕೆ ಮತ್ತು ಇಡೀ ಆರ್ಥಿಕ ವರ್ಷದಲ್ಲಿ ಶೇ. 5ಕ್ಕೆ ಅಂದಾಜು ಮಾಡಲಾಗಿದೆ.

ಆರ್​ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ದ್ವೈಮಾಸಿಕ ಸಭೆ ಏಪ್ರಿಲ್ ಮೊದಲ ವಾರದಲ್ಲಿ ನಿಗದಿಯಾಗಿತ್ತು. ಆದರೆ, ಕರೊನಾ ಕಾರಣ ಈ ಸಭೆಯನ್ನು ಮುಂಚಿತವಾಗಿ ನಡೆಸಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಶುಕ್ರವಾರ ನಡೆದ ಸಭೆಯಲ್ಲಿ ಬಡ್ಡಿ ದರದಲ್ಲಿ 75 ಪೈಸೆ ಕಡಿತ ಮಾಡುವ ನಿರ್ಧಾರಕ್ಕೆ ಎಂಪಿಸಿಯ ಆರು ಸದಸ್ಯರ ಪೈಕಿ ನಾಲ್ವರು ಅನುಮೋದನೆ ನೀಡಿದರು. ಸದಸ್ಯರಾದ ಚೇತನ್ ಘೇಟ್ ಮತ್ತು ಪಾಮಿ ದುವಾ 50 ಪೈಸೆ ಕಡಿಮೆ ಮಾಡುವ ಪ್ರಸ್ತಾವನೆ ಇರಿಸಿದ್ದರು.

ಕರೊನಾದಿಂದ ಆರ್ಥಿಕ ಸವಾಲು ಎದುರಾಗಿದ್ದರೂ ಭಾರತೀಯ ಬ್ಯಾಂಕ್ ವ್ಯವಸ್ಥೆ ಸುರಕ್ಷಿತ ಮತ್ತು ಶಕ್ತಿಯುತವಾಗಿದೆ. ಹೀಗಾಗಿ ಆರ್ಥಿಕತೆ ಬಗ್ಗೆ ನಾನು ಆಶಾವಾದಿಯಾಗಿರುವೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ನಡೆದ 2019-20ನೇ ಸಾಲಿನ ಕೊನೆಯ ದ್ವೈಮಾಸಿಕ ಸಭೆಯಲ್ಲಿ -ಠಿ; 2.70 ಲಕ್ಷ ಕೋಟಿಯ ನೆರವನ್ನು ಆರ್​ಬಿಐ ಘೋಷಿಸಿತ್ತು. ಹೀಗಾಗಿ ಜಿಡಿಪಿಯಲ್ಲಿ ಪ್ರತಿಶತ 3.2ರಷ್ಟು ಹಣಕಾಸು ನೆರವನ್ನು ಆರ್​ಬಿಐ ನೀಡಿದಂತಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಸುಧಾರಣೆಗೂ ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಬ್ಯಾಂಕ್​ಗಳಿಗೆ ನೆರವು

ಮಾರುಕಟ್ಟೆಯಲ್ಲಿ ಹಣಕಾಸಿನ ಹರಿವು ಸುಗಮಗೊಳಿಸಲು ಬ್ಯಾಂಕ್​ಗಳಿಗೆ ಅಲ್ಪಾವಧಿ ನೆರವನ್ನೂ ಆರ್​ಬಿಐ ಘೋಷಿಸಿದೆ. ನಗದು ಮೀಸಲು ಸರಾಸರಿಯಲ್ಲಿ (ಸಿಆರ್​ಆರ್) 100 ಮೂಲಾಂಶವನ್ನು ಕಡಿತ ಮಾಡಲಾಗಿದೆ. ಇದು ಮುಂದಿನ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಈ ನಿರ್ಧಾರದಿಂದ ಆರ್​ಬಿಐನಲ್ಲಿ ಬ್ಯಾಂಕ್​ಗಳು ಇರಿಸಬೇಕಾದ ಕಡ್ಡಾಯ ಠೇವಣಿ ಮೊತ್ತ ತಗ್ಗಲಿದ್ದು, -ಠಿ; 1.37 ಲಕ್ಷ ಕೋಟಿ ಮೊತ್ತ ವಾಣಿಜ್ಯ ಬ್ಯಾಂಕ್​ಗಳಿಗೆ ಮರುಸಂದಾಯವಾಗಲಿದೆ.

ರೆಪೊ ದರ ಇಳಿಕೆ

ದಿನಾಂಕ*ಮೂಲಾಂಶ

ಫೆ.6*25 (ಶೇ.6.50ರಿಂದ 6.25)

ಏ.4*25 (ಶೇ. 6.25ರಿಂದ 6.00)

ಜೂ.6*25(ಶೇ. 6.00ರಿಂದ 5.75)

ಆ.7*35(ಶೇ. 5.75ರಿಂದ 5.40)

ಅ. 4*25(ಶೇ. 5.40ರಿಂದ 5.15)

ಡಿ. 5*ಯಥಾಸ್ಥಿತಿ ಮುಂದುವರಿಕೆ

ಫೆ. 6*ಯಥಾಸ್ಥಿತಿ ಮುಂದುವರಿಕೆ

ಮಾ. 27*75(ಶೇ.5.15ರಿಂದ 4.40)

ಕರೊನಾ ಕಾರಣ ಜಾಗತಿಕ ಮಟ್ಟದಲ್ಲೇ ಆರ್ಥಿಕತೆ ಅನಿಶ್ಚಿತವಾಗಿ ಋಣಾತ್ಮಕವಾಗಿದೆ. ಇಂಥ ಸಂದಿಗ್ಧ ಸಮಯದಲ್ಲಿ ಆರ್ಥಿಕ ಸುಸ್ಥಿರತೆ ಕಾಯ್ದುಕೊಳ್ಳುವುದೇ ಆರ್​ಬಿಐನ ಮೊದಲ ಆದ್ಯತೆ. ಹೀಗಾಗಿ ಬಲಿಷ್ಠ ಮತ್ತು ಉದ್ದೇಶಿತ ಕ್ರಮವನ್ನು ಘೋಷಿಸಲಾಗಿದೆ. ಕರೊನಾ ವಿರುದ್ಧದ ಈ ಹೋರಾಟಕ್ಕೆ ಬ್ಯಾಂಕ್​ಗಳು ಸಹಕರಿಸಬೇಕು. | ಶಕ್ತಿಕಾಂತ್ ದಾಸ್, ಆರ್​ಬಿಐ ಗವರ್ನರ್

ಕರೊನಾ ಕಾರಣ ಸಂಕಷ್ಟಕ್ಕೀಡಾಗಿರುವ ದೇಶದ ಆರ್ಥಿಕತೆ ಯನ್ನು ಸಂರಕ್ಷಿಸುವಂಥ ನಿರ್ಧಾರವನ್ನು ಆರ್​ಬಿಐ ಕೈಗೊಂಡಿದೆ. ಬಡ್ಡಿ ದರ ಇಳಿಕೆ ಮತ್ತು ಇಎಂಐ ತುಂಬುವು ದಕ್ಕೆ ವಿನಾಯಿತಿ ನಿರ್ಧಾರದಿಂದ ಮಧ್ಯಮವರ್ಗದ ಜನರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. | ನರೇಂದ್ರ ಮೋದಿ ಪ್ರಧಾನಿ

ಮನ್ನಾ ಅಲ್ಲ

ಇಎಂಐನಲ್ಲಿನ ಅಸಲು ಮತ್ತು ಬಡ್ಡಿ ಎರಡನ್ನೂ ಇದು ಒಳಗೊಂಡಿರುತ್ತದೆಯಾದರೂ ಇದು ಇಎಂಐ ಮನ್ನಾ ಅಲ್ಲ. ಬದಲಿಗೆ ಪಾವತಿಗೆ 3 ತಿಂಗಳು ವಿನಾಯಿತಿ ಮಾತ್ರ. ಈ ವಿನಾಯಿತಿಯಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ.

ಯಾವಾಗ ಜಾರಿ

ಆರ್​ಬಿಐ ಸೂಚನೆಯನ್ನು ಬ್ಯಾಂಕ್​ಗಳ ಆಡಳಿತ ಮಂಡಳಿಗಳು ಅನುಮೋದಿಸಿದ ನಂತರ ಇದು ಜಾರಿಗೆ ಬರಲಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್​ಬಿಐ, ಆರ್​ಬಿಐ ಸೂಚನೆಯನ್ನು ತಕ್ಷಣದಿಂದಲೇ ಪಾಲನೆ ಮಾಡಲಾಗುವುದು ಎಂದು ತಿಳಿಸಿದೆ.

ಯಾರ್ಯಾರಿಗೆ ವಿನಾಯಿತಿ?

ಎಲ್ಲ ರಾಷ್ಟ್ರೀಕೃತ ಬ್ಯಾಂಕ್​ಗಳು, ಸಹಕಾರಿ ವಲಯದ ಬ್ಯಾಂಕ್ ಹಾಗೂ ಗ್ರಾಮೀಣ ಬ್ಯಾಂಕ್, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು.

ಯಾವುದಕ್ಕೆ ಅನ್ವಯ?

ಗೃಹ, ವಾಹನ, ವೈಯಕ್ತಿಕ ಸಾಲ, ಶಿಕ್ಷಣ, ಎಲೆಕ್ಟ್ರಾನಿಕ್ಸ್ ವಸ್ತುಗಳ ಖರಿದಿಗೆ ಪಡೆದ ಸಾಲ, ಬಂಗಾರ ಅಡಮಾನದ ಮೇಲಿನ ಸಾಲ ಸೇರಿದಂತೆ ನಿಶ್ಚಿತಾವಧಿಗೆ ಪಡೆದ ಎಲ್ಲ ಸಾಲಗಳ ಇಎಂಐ.

ಕೊನೇ ಕಂತು ಹೆಚ್ಚಳ

ಸದ್ಯ ವಿನಾಯಿತಿ ಸಿಕ್ಕಿರುವ 3 ಐಎಂಐಗಳು ಸಾಲದ ಒಟ್ಟು ಅವಧಿಯಲ್ಲಿ ಕೊನೆಯಲ್ಲಿ ಸೇರ್ಪಡೆಯಾಗುತ್ತವೆ. ಆದರೆ ಅವಧಿ ವಿಸ್ತರಣೆ ಕಾರಣಕ್ಕೆ ಗ್ರಾಹಕರು ಕಂತಿನಲ್ಲಿ ಹೆಚ್ಚು ಬಡ್ಡಿ ಕಟ್ಟಬೇಕಿಲ್ಲ.

ವಿನಾಯಿತಿ ಅವಧಿ ಹೆಚ್ಚಲಿ

ಬೆಂಗಳೂರು: ಕರೊನಾ ಪರಿಣಾಮ ಸದ್ಯಕ್ಕೆ ನಿಯಂತ್ರಣಕ್ಕೆ ಬರುವುದಿಲ್ಲವಾದ್ದರಿಂದ ಇಎಂಐ ವಿನಾಯಿತಿಯನ್ನು 3 ತಿಂಗಳ ಬದಲಿಗೆ 6 ತಿಂಗಳಿಗೆ ಹೆಚ್ಚಿಸಬೇಕೆಂದು ಲೆಕ್ಕಪರಿಶೋಧಕ (ಸಿಎ) ಎನ್.ನಿತ್ಯಾನಂದ ಹೇಳಿದ್ದಾರೆ. ಆರ್​ಬಿಐ ಬ್ಯಾಂಕ್​ಗಳಿಗೆ ರಿವರ್ಸ್ ರೆಪೋ ದರ ಪರಿಷ್ಕರಿಸಿರುವುದರಿಂದ ಬ್ಯಾಂಕ್​ಗಳಲ್ಲಿ ನಗದು ಹರಿವು ಸುಗಮವಾಗಲಿದೆ. ಅದರ ಜತೆಗೆ ಮಾ.1ನೇ ತಾರೀಖಿನಿಂದ ಅನ್ವಯವಾಗುವಂತೆ ಸಾಲದ ಮೂಲ ಮೊತ್ತ ಮತ್ತು ಬಡ್ಡಿ ಮರುಪಾವತಿಯನ್ನು 3 ತಿಂಗಳ ಕಾಲ ಮುಂದೂಡಲಾಗಿದೆ. ರ್ವಂಗ್ ಕ್ಯಾಪಿಟಲ್​ನ ಮಾರ್ಜಿನ್ (ಗಡುವು) ಶೇ. 25ರಿಂದ ಶೇ. 15ರವರೆಗೆ ನಿಗದಿ ಮಾಡಲಾಗಿದೆ. ಮುಂದಿನ 3 ತಿಂಗಳು ಸಾಲ ಮರುಪಾವತಿ ಮಾಡದಿದ್ದರೂ, ಕ್ರೆಡಿಟ್ ಹಿಸ್ಟರಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಮಾಡಲಾಗಿದೆ. ಇವೆಲ್ಲವೂ ಉತ್ತಮ ಕ್ರಮ ಎಂದಿದ್ದಾರೆ.

3 ತಿಂಗಳಲ್ಲಿ ಅಸಾಧ್ಯ: ಈ ಎಲ್ಲದರಿಂದ ದೇಶದ ಮಧ್ಯಮ, ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಆದರೆ, ಸದ್ಯ ದೇಶದ ಆರ್ಥಿಕತೆ ಕುಸಿದಿದ್ದು, ಕರೊನಾ ಭೀತಿ ಕಡಿಮೆಯಾಗುವವರೆಗೂ ಅದು ಇನ್ನಷ್ಟು ಇಳಿಮುಖವಾಗಲಿದೆ. ಪ್ರಮುಖವಾಗಿ ಕೈಗಾರಿಕಾ ವಲಯದಲ್ಲಿ ಉತ್ಪಾದನೆಗೆ ಬೇಡಿಕೆ ಕಡಿಮೆಯಾಗಲಿದೆ, ಕಚ್ಚಾವಸ್ತುಗಳ ಕೊರತೆ ಎದುರಾಗಲಿದೆ. ಅದರಿಂದ ಎಲ್ಲ ಉದ್ಯಮಗಳೂ ಸ್ತಬ್ಧವಾಗಲಿವೆ. ಅದರಿಂದ ಚೇತರಿಸಿಕೊಳ್ಳಲು 3 ತಿಂಗಳಲ್ಲಿ ಸಾಧ್ಯವಾಗುವುದಿಲ್ಲ.

ಅದರ ಜತೆಗೆ ನಿರುದ್ಯೋಗ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ನಿರ್ಮಾಣ ಕ್ಷೇತ್ರ ಸ್ತಬ್ಧವಾಗಿರುವುದರಿಂದ ನಿರುದ್ಯೋಗ ಸಮಸ್ಯೆ ಶುರುವಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಕನಿಷ್ಠ ವೇತನದ ಪ್ರಮಾಣದಲ್ಲೂ ಬದಲಾವಣೆಯಾಗಬೇಕಿದೆ. ಅದರಿಂದ ಕೆಲಸವಿಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಕಾರ್ವಿುಕರಿಗೆ ಸಮಸ್ಯೆ ಎದುರಾಗುವುದು ಕಡಿಮೆಯಾಗಲಿದೆ ಎಂದು ಎನ್.ನಿತ್ಯಾನಂದ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net