ಸಂಪಾದಕೀಯ: ಆರ್​ಬಿಐ ನಿರ್ಧಾರ ಸ್ವಾಗತಾರ್ಹ

2-67f6b121c02f7 (1)
Published on

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ 25 ಮೂಲಾಂಶದಷ್ಟು ಕಡಿತಗೊಳಿಸಿದ್ದು, ಇದನ್ನು ಶೇಕಡ 6ಕ್ಕೆ ಇಳಿಸಿದೆ. ರೆಪೊ ದರವನ್ನು ಕಡಿಮೆ ಮಾಡಲು ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿದೆ ಎಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ರೆಪೊ ದರ ಕಡಿತದಿಂದ ಬ್ಯಾಂಕ್​ಗಳಿಗೆ ಸಾಲದ ವೆಚ್ಚ ಕಡಿಮೆ ಆಗಲಿದ್ದು, ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಅನುವು ಮಾಡಿಕೊಡುತ್ತದೆ. ಸಾಲಗಳ ಮೇಲಿನ ಇಎಂಐ ಮೊತ್ತ ಕಡಿಮೆಯಾಗುತ್ತದೆ. 2025ರಲ್ಲಿ ಆರ್​ಬಿಐ ಎರಡನೇ ಬಾರಿಗೆ ರೆಪೊ ದರ ಕಡಿತ ಮಾಡಿದೆ.

ಇದಕ್ಕೂ ಮುನ್ನ ಫೆಬ್ರವರಿ 7ರಂದು ರೆಪೊ ದರವನ್ನು ಶೇ.6.25ಕ್ಕೆ ಇಳಿಸಿತ್ತು. ಜನಸಾಮಾನ್ಯರ ಮೇಲೆ ಬೆಲೆಯೇರಿಕೆ ನಾಲ್ಕೂ ದಿಕ್ಕುಗಳಿಂದಲೂ ಪ್ರಹಾರ ಮಾಡುತ್ತಿರುವಾಗ ಆರ್​ಬಿಐ ರೆಪೊ ದರವನ್ನು ಕಡಿಮೆಗೊಳಿಸಿರುವುದು ಒಂದಿಷ್ಟು ಸಮಾಧಾನ ನೀಡುವ ಸಂಗತಿ. ಆರ್ಥಿಕ ವರ್ಷದ ಆರಂಭದಲ್ಲಿ ಜನಸಾಮಾನ್ಯರು ಒಂದಿಷ್ಟು ಸಂಕಲ್ಪಗಳನ್ನು ಮಾಡಿರುತ್ತಾರೆ. ವೆಚ್ಚ ತಗ್ಗಿಸಬೇಕು, ಹೂಡಿಕೆ ಹೆಚ್ಚಿಸಬೇಕು, ಉಳಿತಾಯಕ್ಕೆ ಆದ್ಯತೆ ನೀಡಬೇಕು ಹೀಗೆ ಹಲವು ಆಶಯಗಳನ್ನು ಇಟ್ಟುಕೊಂಡು ಕೌಟುಂಬಿಕ ಬಜೆಟ್​ನ್ನು ರೂಪಿಸಿರುತ್ತಾರೆ.

ಆದರೆ, ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜೀವನ ನಿರ್ವಹಣೆ ವೆಚ್ಚ ಗಣನೀಯವಾಗಿ ಏರಿದೆ. ಹೀಗಿರುವಾಗ ಸಾಲ ತೆಗೆದುಕೊಳ್ಳುವ ಪ್ರಮಾಣವೂ ಹೆಚ್ಚುವ ಸಾಧ್ಯತೆ ಇರುತ್ತದೆ.

ಮತ್ತೊಂದೆಡೆ, ಸುಂಕ ಸಮರದ ಬಳಿಕ ಜಾಗತಿಕ ಆರ್ಥಿಕ ಅನಿಶ್ಚಿತತೆ ಮೂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೂ ಶೇಕಡ 26ರಷ್ಟು ಪರಸ್ಪರ ತೆರಿಗೆ ವಿಧಿಸಿದ್ದಾರೆ. ಚೀನಾದ ಮೇಲಂತೂ ಶೇ.104ರಷ್ಟು ಸುಂಕ ವಿಧಿಸಿದ್ದು, ಆ ಎರಡೂ ರಾಷ್ಟ್ರಗಳ ವ್ಯಾಪಾರ ಸಮರ ತೀವ್ರಗೊಂಡಿದೆ.

ಅಲ್ಲದೆ, ವಾಹನ, ಔಷಧಗಳ ಮೇಲೂ ಟ್ರಂಪ್ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ತಮ್ಮ ಈ ಸುಂಕ ಹೇರಿಕೆ ನಿರ್ಣಯದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಇದರ ಪರಿಣಾಮಗಳು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟಗೊಳ್ಳಲಿವೆ.

ಇಂಥ ಸಂದರ್ಭದಲ್ಲಿ ರೆಪೊ ದರದಲ್ಲಿ ಶೇ.0.25 ಮೂಲಾಂಶ ಕಡಿತಗೊಳಿಸುವ ಆರ್​ಬಿಐ ನಿರ್ಣಯವು ಒಟ್ಟಾರೆ ಆರ್ಥಿಕ ಚಟುವಟಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದೆಂಬುದು ಆರ್ಥಿಕ ತಜ್ಞರ ಲೆಕ್ಕಾಚಾರ. ಬಡ್ಡಿ ದರ ಕಡಿತದ ಲಾಭವನ್ನು ಬ್ಯಾಂಕುಗಳು ತ್ವರಿತವಾಗಿ ಗ್ರಾಹಕರಿಗೆ ವರ್ಗಾಯಿಸುವುದು ಕೂಡ ಅಷ್ಟೇ ಪ್ರಮುಖವಾದುದು.

ಆರ್​ಬಿಐ ರೆಪೊ ದರ ಕಡಿಮೆ ಮಾಡಿದರೂ ಬ್ಯಾಂಕುಗಳು ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸದ ನಿದರ್ಶನಗಳನ್ನೂ ಹಿಂದೆ ನೋಡಿದ್ದೇವೆ. ಈ ಬಾರಿ ಹಾಗಾಗದು ಎಂದು ಆಶಿಸೋಣ. ಏಕೆಂದರೆ ಆರ್ಥಿಕತೆಯ ಚಕ್ರದಲ್ಲಿ ಸಾಲಗಾರರು ಸಹ ಪ್ರಮುಖ ಪಾತ್ರಧಾರಿಗಳೇ ಆಗಿದ್ದಾರೆ. ಅಗತ್ಯವಿರುವವರಿಗೆ ಸುಲಭ ಸಾಲ ಲಭ್ಯತೆ ಹಾಗೂ ಬಡ್ಡಿ ದರದಲ್ಲಿನ ಇಳಿಕೆಯು ಸಹಜವಾಗಿಯೇ ಮರುಪಾವತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯ ಚಲನಶೀಲತೆಗೆ ಕೊಡುಗೆ ನೀಡುತ್ತದೆ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net