

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂ. ನೋಟುಗಳನ್ನು ಹಿಂಪಡೆದಿದ್ದು, ಅದನ್ನು ಮರಳಿಸಲು ಕಾಲಾವಕಾಶವನ್ನು ನೀಡಿದೆ. ಆ ಕುರಿತು ಇನ್ನು ಕೆಲವು ದಿನಗಳು ಉಳಿದಿದ್ದು, ಈಗಾಗಲೇ ವಾಪಸ್ ಬಂದಿರುವ ನೋಟುಗಳೆಷ್ಟು ಎಂಬ ಬಗ್ಗೆಯೂ ಆರ್ಬಿಐ ಮಾಹಿತಿ ನೀಡಿದೆ.
ಹಿಂಪಡೆಯುವ ಕುರಿತು ಘೋಷಿಸಿದ ಬಳಿಕ ಶೇ. 76ರಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕ್ಗೆ ಮರಳಿಸಲ್ಪಟ್ಟಿವೆ ಎಂದು ಆರ್ಬಿಐ ತಿಳಿಸಿದೆ. ಹಿಂಪಡೆಯುವ ಕುರಿತು ಘೋಷಣೆ ಮಾಡಿದ ಮೇ 19ರ ವರೆಗೆ 3.56 ಲಕ್ಷ ಕೋಟಿ ರೂಪಾಯಿಯಷ್ಟು 2 ಸಾವಿರ ರೂ. ನೋಟುಗಳು ಚಾಲನೆಯಲ್ಲಿದ್ದವು. ಆದರೆ ಆ ಬಳಿಕ 2.72 ಲಕ್ಷ ಕೋಟಿ ರೂಪಾಯಿಯಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕ್ಗೆ ಮರಳಿಸಲ್ಪಟ್ಟಿವೆ ಎಂದು ಆರ್ಬಿಐ ಹೇಳಿದೆ.
ಬ್ಯಾಂಕ್ಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಹಿಂದಿರುಗಿಸಲ್ಪಟ್ಟ ನೋಟುಗಳ ಪೈಕಿ ಶೇ. 87 ಠೇವಣಿ ರೂಪದಲ್ಲಿ ಮರಳಿದ್ದು, ಶೇ. 13ರಷ್ಟು ಮಾತ್ರ ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಲಾಗಿದೆ. ಎರಡು ಸಾವಿರ ರೂ. ನೋಟುಗಳನ್ನು ಹಿಂದಿರುಗಿಸಲು ಸೆ. 30 ಕಡೇ ದಿನವಾಗಿದ್ದು, ಕೊನೆಯ ಹಂತದಲ್ಲಿನ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಆದಷ್ಟು ಮುಂಚಿತವಾಗಿಯೇ ನೋಟುಗಳನ್ನು ಹಿಂದಿರುಗಿಸಬೇಕು ಎಂದು ಆರ್ಬಿಐ ಕೋರಿಕೊಂಡಿದೆ.