

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಈಗಾಗಲೇ ಎರಡು ಬಾರಿ ಬಡ್ಡಿ ದರ ಇಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬರುವ ಶುಕ್ರವಾರ ‘ಜಂಬೋ ದರ ಕಡಿತ’ಕ್ಕೆ ಸಿದ್ಧವಾಗಿದೆ ಎಂದು ಎಸ್ಬಿಐ ಸಂಶೋಧನಾ ವರದಿ ತಿಳಿಸಿದೆ. ಬಡ್ಡಿ ದರ ನಿರ್ಧರಿಸುವ ಹಣಕಾಸು ನೀತಿ ಸಮಿತಿ ಜೂ. 4ರಿಂದ 3 ದಿನ ಸಭೆ ನಡೆಸಲಿದ್ದು, ಕೊನೆಯ ದಿನ ತನ್ನ ತೀರ್ವನವನ್ನು ಪ್ರಕಟಿಸಲಿದೆ.
ಆರ್ಬಿಐ ಫೆಬ್ರವರಿಯಲ್ಲಿ 25 ಮೂಲಾಂಶ ಮತ್ತು ಏಪ್ರಿಲ್ನಲ್ಲಿ 25 ಮೂಲಾಂಶ ಬಡ್ಡಿ ದರ ಕಡಿತ ಮಾಡಿತ್ತು. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ 6 ಸದಸ್ಯರ ಈ ಸಮಿತಿ ಈ ಸಲ ಒಮ್ಮೆಲೇ 50 ಮೂಲಾಂಶದಷ್ಟು ಬಡ್ಡಿ ದರ ಕಡಿತ ಮಾಡಬಹುದು ಎಂದು ಎಸ್ಬಿಐನ ವರದಿ ತಿಳಿಸಿದೆ.
ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ನಡೆಸಿದ ವಹಿವಾಟು ಮೇ ತಿಂಗಳಲ್ಲಿ 25.14 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಅದರ ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ. 5ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್ಸಿಪಿಐ) ತಿಳಿಸಿದೆ. ಏಪ್ರಿಲ್ನಲ್ಲಿ ಇದು 23.94 ಲಕ್ಷ ಕೋಟಿ ರೂ.ನಷ್ಟಿತ್ತು. ಏಪ್ರಿಲ್ನಲ್ಲಿ 1,789 ಕೋಟಿ ವಹಿವಾಟುಗಳಾಗಿದ್ದರೆ, ಮೇನಲ್ಲಿ ವಹಿವಾಟುಗಳ ಸಂಖ್ಯೆ 1,867 ಕೋಟಿಗೆ ಏರಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ 20.44 ಲಕ್ಷ ಕೋಟಿ ರೂ. ವಹಿವಾಟು ಆಗಿತ್ತು. ಅದಕ್ಕೆ ಹೋಲಿಸಿದರೆ ವಾರ್ಷಿಕ ಲೆಕ್ಕದಲ್ಲಿ ಈ ಮೇ ತಿಂಗಳಿನ ವಹಿವಾಟು ಶೇ. 23ರಷ್ಟು ಏರಿಕೆಯಾದಂತಾಗಿದೆ.