ಆರ್​ಬಿಐ ಬಡ್ಡಿ ದರ ಇಳಿಕೆ ಸಂಭವ

5-67a104881dc9d
Published on

25 ಮೂಲಾಂಶದಷ್ಟು ಕಡಿತ | ಶುಕ್ರವಾರದ ಹಣಕಾಸು ಸಮಿತಿ ಸಭೆಯಲ್ಲಿ ನಿರ್ಧಾರ

ಮುಂಬೈ: ಕೇಂದ್ರ ಬಜೆಟ್​ನ ಆಶಯಗಳಿಗೆ ಅನುಗುಣವಾಗಿ ಸಾಲಗಳ ಬಡ್ಡಿ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಈ ವಾರದಲ್ಲಿ 25 ಮೂಲಾಂಶಗಳಷ್ಟು ಇಳಿಸುವ ಸಾಧ್ಯತೆ ಇದೆ. ಕಳೆದ ಸುಮಾರು ಎರಡು ವರ್ಷಗಳಿಂದ ಆರ್​ಬಿಐ ಬಡ್ಡಿ ದರ ಪರಿಷ್ಕರಣೆ ಮಾಡಿಲ್ಲ.

ಚಿಲ್ಲರೆ ಹಣದುಬ್ಬರ ಈಗ ವರ್ಷದ ಬಹುಪಾಲು ಸಮಯ ಆರ್​ಬಿಐನ ನಿರೀಕ್ಷೆಯಂತೆ ಶೇ. 6ರ ಒಳಗೇ ಇರುವುದರಿಂದ ಅದು ಈಗ ಬಡ್ಡಿ ದರ ಇಳಿಸುವ ಮೂಲಕ ಕುಂಠಿತಗೊಂಡಿರುವ ಬೇಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಪಾವಧಿ ಸಾಲದ ಬಡ್ಡಿ ದರವನ್ನು (ರೆಪೊ ರೇಟ್) ಆರ್​ಬಿಐ 2023ರ ಫೆಬ್ರವರಿಯಿಂದ ಶೇ. 6.5ರಲ್ಲೇ ಸ್ಥಿತಗೊಳಿಸಿದೆ. ಈ ಮೊದಲು ಆರ್​ಬಿಐ ಬಡ್ಡಿ ದರ ಇಳಿಸಿದ್ದು ಕೋವಿಡ್ ಸಮಯದಲ್ಲಿ (ಮೇ 2020). ನಂತರ ಅದು ಕ್ರಮೇಣ ಶೇ. 6.5ಕ್ಕೆ ತಲುಪಿತು. ಆರ್​ಬಿಐನ ಹಣಕಾಸು ನೀತಿ ಸಮಿತಿಯ ಸಭೆ ಬುಧವಾರ ಆರಂಭವಾಗಲಿದ್ದು, ಸಂಜಯ್ ಮಲ್ಹೋತ್ರಾ ಆರ್​ಬಿಐ ಗವರ್ನರ್ ಆಗಿ ನೇಮಕಗೊಂಡ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಆರು ಸದಸ್ಯರ ಈ ಸಮಿತಿಯ ನಿರ್ಧಾರ ಶುಕ್ರವಾರ ಫೆ. 7ರಂದು ಹೊರಬೀಳಲಿದೆ.

‘ಈ ಸಲ ಬಡ್ಡಿ ದರ ಇಳಿಕೆ ಆಗಿಯೇ ಆಗುತ್ತದೆ ಎಂದು ಹೇಳಲು ಎರಡು ಕಾರಣಗಳಿವೆ. ಮೊದಲನೆಯದು, ಆರ್​ಬಿಐ ಈಗಾಗಲೇ ಬ್ಯಾಂಕಿಂಗ್ ವಲಯದಲ್ಲಿ ಲಿಕ್ವಿಡಿಟಿ ಹೆಚ್ಚಳ ಮಾಡುವ ಕ್ರಮಗಳನ್ನು ಘೊಷಿಸಿರುವುದು. ಇದರಿಂದ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದು ಗೋಚರಿಸಿದೆ. ಬಡ್ಡಿ ದರ ಇಳಿಕೆಗೆ ಇದು ಮುನ್ನುಡಿ ಇದ್ದಂತಿದೆ. ಮತ್ತೊಂದು, ಕೇಂದ್ರ ಬಜೆಟ್ ನಿನ್ನೆಯಷ್ಟೇ ಆರ್ಥಿಕತೆಗೆ ವೇಗ ನೀಡುವ ಕ್ರಮಗಳನ್ನು ಘೊಷಿಸಿದೆ. ಅದಕ್ಕೆ ಪೂರಕವಾಗಿ ಆರ್​ಬಿಐ ಬಡ್ಡಿ ದರ ಇಳಿಕೆಯ ಕ್ರಮಕ್ಕೆ ಮುಂದಾಗಲಿದೆ’ ಎನ್ನುತ್ತಾರೆ ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್.

ಐಸಿಆರ್​ಎ ಸಂಶೋಧನಾ ವಿಭಾಗದ ಮುಖ್ಯಸ್ಥೆ ಅದಿತಿ ನಾಯರ್ ಹೇಳುವ ಪ್ರಕಾರ, ಕಳೆದ ವರ್ಷದ ಡಿಸೆಂಬರ್​ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ದೇಶದ ಹಣದುಬ್ಬರ ಅಂಕಿಸಂಖ್ಯೆಗಳಲ್ಲಿ ಭಾರಿ ಬದಲಾವಣೆಗಳಾಗಿವೆ. ಹಾಗಾಗಿ ಈ ಸಲದ ಸಭೆಯಲ್ಲಿ ಬಡ್ಡಿ ದರ ಇಳಿಸುವ ಎಲ್ಲ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net