

RBI: ಇದು ಡಿಜಿಟಲ್ ಯುಗ. ಎಐನಂತಹ ಆಧುನಿಕ ಟೆಕ್ನಾಲಜಿಗಳ ಹೊಸ ಆವಿಷ್ಕಾರಗಳ ಬದುಕು. ಹೀಗಿರುವಾಗ 6 ಇಂಚಿನ ಸ್ಮಾರ್ಟ್ಫೋನ್ನ ದೊಡ್ಡ ಪರದೆಯಲ್ಲಿ ಉಪಯೋಗಿಸುವ ಜಾಲತಾಣಗಳಲ್ಲಿ ಚಿತ್ರ-ವಿಚಿತ್ರ ಸುದ್ದಿಗಳು ಭಾರೀ ಸುದ್ದಿ-ಸದ್ದು ಮಾಡುವುದು ತೀರ ಸಾಮಾನ್ಯ. ಆದರೆ, ಕೆಲವು ವಿಷಯಗಳು ಮಾತ್ರ ಜನಸಾಮಾನ್ಯರನ್ನು ಭಾರೀ ಗೊಂದಲಕ್ಕೆ ದೂಡುತ್ತವೆ. ಎಲ್ಲ ವಿಚಾರಗಳಿಗೂ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ, ತಮ್ಮ ದೈನಂದಿನ ಕಾರ್ಯಗಳಿಗೆ ತೊಂದರೆ ಅಥವಾ ಪರಿಣಾಮ ಬೀರುವ ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ. ಅದು ನಕಲಿಯೋ, ಸತ್ಯವೋ ಎಂಬುದನ್ನು ಸಾವಾಧಾನ ಚಿತ್ತದಿಂದ ಅರ್ಥೈಸಿಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಇಲ್ಲಿಯೂ ಕೂಡ ಅದೇ ನಡೆದಿರುವುದು.
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿರುವ ಹೊಸ ಮಾರ್ಗಸೂಚಿ ಜನರಲ್ಲಿ ಭಾರೀ ಆತಂಕವನ್ನು ಹುಟ್ಟುಹಾಕಿದೆ. ಚೆಕ್ ಬರೆಯುವುದರ ಬಗ್ಗೆ ತನ್ನ ಹಿಂದಿನ ಮಾರ್ಗಸೂಚಿಯನ್ನು ಬದಲಾವಣೆಗೊಳಿಸಿರುವ ಆರ್‌ಬಿಐ, ಇನ್ಮುಂದೆ ಕಪ್ಪು ಶಾಹಿಯಲ್ಲಿ ಚೆಕ್ ಅನ್ನು ಬರೆಯುವಂತಿಲ್ಲ. ಬರೆದರೆ ಅದನ್ನು ಬ್ಯಾಂಕಿನಲ್ಲಿ ಪರಿಗಣಿಸುವುದಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವ ಪ್ರತಿ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಕೆಲವರು ಇದು ಸುಳ್ಳು ಸುದ್ದಿ ಎಂದರೆ, ಇನ್ನೂ ಕೆಲವರು ಇಲ್ಲ, ಇದು ಅಧಿಕೃತ ಆರ್‌ಬಿಐ ಪ್ರಕಟಿಸಿರುವ ಮಾಹಿತಿಯೇ ಎಂದು ವಾದಿಸಿದ್ದಾರೆ.
ಹೊಸ ವರ್ಷದಿಂದ ಕಪ್ಪು ಶಾಹಿಯಲ್ಲಿ ಬರೆದ ಯಾವುದೇ ಚೆಕ್ಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿರುವುದಾಗಿ ವೈರಲ್ ಪ್ರತಿ ಒತ್ತಿ ಹೇಳಿದೆ. ನೀಲಿ ಮತ್ತು ಹಸಿರು ಬಣ್ಣದ ಶಾಹಿಯಲ್ಲಿ ಬರೆದಿರುವ ಚೆಕ್ಗಳನ್ನು ಮಾತ್ರ ಬ್ಯಾಂಕ್ಗಳು ಸ್ವೀಕರಿಸಲಿದೆ. ಅದನ್ನು ಹೊರತುಪಡಿಸಿ ಇನ್ಯಾವ ಶಾಹಿಯಲ್ಲಿ ಬರೆದರೂ ಆ ಚೆಕ್ಗಳನ್ನು ಸ್ವೀಕರಿಸುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಅಸಲಿಗೆ ಇದು ಸತ್ಯವೋ? ಸುಳ್ಳೋ ಎಂಬ ಗೊಂದಲ ಅನೇಕರಲ್ಲಿ ಕಾಡುತ್ತಿತ್ತು. ಕಡೆಗೂ ಇದಕ್ಕೆ ಈಗ ಸ್ಪಷ್ಟ ಉತ್ತರ ಲಭಿಸಿದೆ.
ವೈರಲ್ ಆದ ಸುದ್ದಿಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ಈ ಮಾರ್ಗಸೂಚಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಚೆಕ್ ಬರೆಯಲು ಕಪ್ಪು ಶಾಯಿ ಬಳಸುವುದನ್ನು ನಿಷೇಧಿಸುವ ಯಾವುದೇ ಮಾರ್ಗಸೂಚಿಗಳನ್ನು ಆರ್‌ಬಿಐ ಇಲ್ಲಿಯವರೆಗೂ ಪ್ರಸಾಪಿಸಿಲ್ಲ ಹಾಗೂ ಪ್ರಕಟಿಸಿಲ್ಲ. ಚೆಕ್ ಬರೆಯಲು ಕಪ್ಪು ಶಾಹಿಯ ಬಣ್ಣವನ್ನು ಬಳಸಬಹುದಾಗಿದೆ. ಭಾರತ ಸರ್ಕಾರದ ಅಧಿಕೃತ ಸತ್ಯ-ಪರಿಶೀಲನಾ ಘಟಕವಾದ ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಈ ಗೊಂದಲವನ್ನು ಬಗೆಹರಿಸಿದ್ದು, ಈ ವೈರಲ್ ಪೋಸ್ಟ್ ನಕಲಿ. ಆರ್‌ಬಿಐ ಅಂತಹ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).