

ರಾವಂದೂರು: ಗ್ರಾಮದ ವ್ಯಕ್ತಿಗೆ ಕರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತ ವಾಸವಾಗಿದ್ದ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದರೂ ರಾವಂದೂರು ಸಂಪೂರ್ಣ ಬಂದ್ ಆಗಿದೆ.
ಔಷಧ ಅಂಗಡಿಗಳು, ಹಾಲು, ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದರೆ ಹೋಟೆಲ್, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸೋಂಕಿತ ಮನೆ ಸದಸ್ಯರನ್ನು ಪಿರಿಯಾಪಟ್ಟಣದಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಸೀಲ್‌ಡೌನ್ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿಯಿಂದ ಕ್ರಿಮಿನಾಶಕವನ್ನು ಸಿಂಪಡಿಸಲಾಗಿತ್ತು. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ಮುಖಾಂತರ ಪ್ರತಿ ಮನೆಗೂ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ.
ರಾವಂದೂರು ಎಸ್.ಕೊಪ್ಪಲು ಗ್ರಾಮದಲ್ಲಿ ಯುವಕರು ತಮ್ಮ ಬೀದಿಗಳಿಗೆ ಹೊರಗಿನಿಂದ ಯಾವುದೇ ವ್ಯಕ್ತಿಗಳು ಬಾರದಂತೆ ರಸ್ತೆಗಳಿಗೆ ಕಲ್ಲು ಮತ್ತು ಮರಗಳನ್ನು ಅಡ್ಡಲಾಗಿ ಇಟ್ಟು ಬಂದ್ ಮಾಡಿದರು.
ಸ್ಥಳಕ್ಕೆ ಉಪವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್ ಶ್ವೇತಾ ರವೀಂದ್ರ, ಇಒ ಶ್ರುತಿ, ಸಬ್‌ಇನ್ಸ್‌ಪೆಕ್ಟರ್ ಗಣೇಶ್, ತಾಲೂಕು ಆರೋಗ್ಯಾಧಿಕಾರಿ ನಾಗೇಶ್, ಡಾ.ಸುನೀಲ್‌ಕುಮಾರ್, ಉಪತಹಸೀಲ್ದಾರ್ ಕೆಂಚಯ್ಯ, ಆರ್.ಐ.ಶ್ರೀಧರ್, ಪಿಡಿಒ ಕೆಂಚೇಗೌಡ, ಆರೋಗ್ಯ ಇಲಾಖೆಯ ಪ್ರಕಾಶ್, ಪ್ರದೀಪ್, ಶಿವನಂಜಯ್ಯ, ಬಸವರಾಜ್ ಮತ್ತಿತರರು ಹಾಜರಿದ್ದರು.