

ಮಂಡ್ಯ: ಕ್ಷೇತ್ರದಲ್ಲಿ ನೊಂದ ಜನರಿಗೆ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ಅಧಿಕಾರವಿದ್ದಾಗ ಎಂದಿಗೂ ಕಾಲಹರಣ ಮಾಡಿಲ್ಲ. ಕೆಲವರಿಗೆ ನನ್ನಿಂದ ಮುಜುಗರ ಆಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರಿಗೆ ಕೃತಜ್ಞತಾ ಮತ್ತು ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಬರುತ್ತದೆ, ಹೋಗುತ್ತದೆ ಧೈರ್ಯವಾಗಿರಿ. ಜೆಡಿಎಸ್ ಕಾರ್ಯಕರ್ತರು ಯಾವುದಕ್ಕೂ ಧೃತಿಗೆಡುವುದು ಬೇಡ. 2008ರಲ್ಲಿ ನಾನು ಶಾಸಕನಾಗುವುದನ್ನು ತಪ್ಪಿಸಲು ದೊಡ್ಡ ವ್ಯೆಹ ರಚನೆ ಮಾಡಲಾಗಿತ್ತು. 2013ರಲ್ಲೂ ಷಡ್ಯಂತ್ರ ನಡೆಯಿತು. ಆದರೆ 2018ರಲ್ಲಿ ಎಲ್ಲರ ಹಾರೈಕೆಯೊಂದಿಗೆ ದೊಡ್ಡ ಗೆಲುವು ಸಾಧಿಸಿ ಶಾಸಕನಾದೆ. ನನ್ನ ಶಾಸಕ ಪದವಿಗೆ ದ್ರೋಹ ಬಗೆಯದೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದರು.
36 ಹಳ್ಳಿಗಳಿಗೆ ನದಿ ನೀರು ನೀಡಲು ಪ್ರಯತ್ನ ಮಾಡಿದ್ದೇನೆ. ಆದರೆ ಅದನ್ನು ಜನರು ಅರ್ಥ ಮಾಡಿಕೊಳ್ಳಲಿಲ್ಲ. ನನಗೆ ರಾಜಕೀಯ ಏರಿಳಿತಗಳಿಂದ ಸೋಲಾಗಲಿಲ್ಲ. ಬದಲಿಗೆ ಬಿಜೆಪಿಯ ದುರಾಡಳಿತ, ಮುಸ್ಲಿಂ ಸಮುದಾಯವನ್ನು ಉಸಿರಾಡಲು ಆಗದ ಸ್ಥಿತಿಗೆ ದೂಡಿದ್ದಕ್ಕೆ ನಾವು ಬಲಿಯಾಗಬೇಕಾಯಿತು. ಹಿಜಾಬ್ ವಿವಾದ ಆರಂಭವಾದ ಮೂರು ದಿನದವರೆಗೆ ಕಾಂಗ್ರೆಸ್ ನಾಯಕರು ಮಾತನಾಡಲಿಲ್ಲ. ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದೆವು. ಸರ್ವರೂ ಶಾಂತಿ ಸಹಬಾಳ್ವೆಯಿಂದ ಬಾಳ್ವೆ ಮಾಡಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡಿದ್ದರಿಂದ ಮುಸ್ಲಿಂ ಸಮುದಾಯ ಒಂದುಗೂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ, ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ ಪರಿಣಾಮ ಸಮುದಾಯದವರೆಲ್ಲಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣದಿಂದಾಗಿ ಕುರುಬ ಸಮುದಾಯ ಅವರ ಬೆಂಬಲಕ್ಕೆ ನಿಂತಿತು. ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ ಸುಮಾರು 25 ಸಾವಿರ ಮತದಾರರಿದ್ದಾರೆ. ಸಿದ್ದರಾಮಯ್ಯ ಅವರು ಇದು ನನ್ನ ಕಡೆ ಚುನಾವಣೆ ಎಂದು ಹೇಳಿದ ಪರಿಣಾಮ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಆದರೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷದ ಕೈ ಬಿಟ್ಟಿಲ್ಲ. ನಾನು ಕೂಡ ನಿರಂತರವಾಗಿ ನಿಮ್ಮೊಂದಿಗೆ ನಿಲ್ಲುವ ಮೂಲಕ ಮುಂಬರುವ ಚುನಾಣೆಗಳತ್ತ ಗಮನ ಹರಿಸೋಣ ಎಂದರು.
ಕ್ಷೇತ್ರದ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಳ್ಳೆಯ ಕೆಲಸಕ್ಕೆ ನಾವು ಕೂಡ ಸಾಥ್ ನೀಡುತ್ತೇವೆ. ಕೆಟ್ಟ, ದ್ವೇಷದ ಕೆಲಸ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ನನ್ನ ಜೀವ ಇರುವವರೆಗೂ ಜನರ ಪರವಾಗಿ ಇರುತ್ತೇನೆ. ಚುನಾವಣೆಗಳಿಗೂ ಸ್ಪರ್ಧೆ ಮಾಡುತ್ತೇನೆ. ನನ್ನ ಯೋಗ್ಯತೆ ಮೇಲೆ ಅಧಿಕಾರ ಬರುವ ದಿನಗಳವರೆಗೂ ಕಾಯುತ್ತೇನೆ. ಕಾರ್ಯಕರ್ತರು ನನ್ನ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸ ಇಟ್ಟಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ, ಯುವ ಘಟಕ ಅಧ್ಯಕ್ಷ ಕಡತನಾಳು ಸಂಜಯ್, ಕಾರ್ಯಾಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಶ್ರೀನಿವಾಸ್, ಲಿಂಗರಾಜು, ಕೃಷ್ಣಪ್ಪ, ನರಸಿಂಹೇಗೌಡ, ಎಸ್.ಟಿ.ರಾಜು, ಗಂಜಾಂ ಶಿವು, ಮಾಜಿ ಸದಸ್ಯ ಸಾಯಿಕುಮಾರ್, ನಳಿನಾ ಇತರರಿದ್ದರು.