

ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ವಿುಸಿರುವ ಮೊದಲ ಚಿತ್ರ ‘ವಿಜಯಾನಂದ’. ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಅದ್ಧೂರಿ ಮೇಕಿಂಗ್, ಗಟ್ಟಿ ಚಿತ್ರಕಥೆಗೆ ಪ್ರೇಕ್ಷಕರು ಸೈ ಎಂದಿದ್ದಾರೆ. ಹಿರಿಯ ನಟ ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ವಿನಯಾ ಪ್ರಸಾದ್, ರಾಜೇಶ್ ನಟರಂಗ, ಸಿರಿ ಪ್ರಹ್ಲಾದ್, ನಿಹಾಲ್, ಕಾರ್ತಿಕ್ ಪತ್ತಾರ್, ನಟರಾಜ್, ಉಮೇಶ್ ಬಣಕಾರ್, ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಸೇರಿದಂತೆ ಹಲವಾರು ದಿಗ್ಗಜರು, ಯುವಪ್ರತಿಭೆಗಳು ‘ವಿಜಯಾನಂದ’ ಚಿತ್ರದಲ್ಲಿ ನಟಿಸಿದ್ದಾರೆ.
ಅದರಲ್ಲೂ ರವಿಚಂದ್ರನ್ ಅವರ ಖಡಕ್ ‘ಗಣೇಶ್ ದಾದಾ’ ಪಾತ್ರ ಜನರಿಗೆ ಫೇವರಿಟ್ ಎನಿಸಿದೆ. ಅದಕ್ಕೆ ಕಾರಣ, ಇದುವರೆಗೆ ರವಿಚಂದ್ರನ್ ಬಯೋಪಿಕ್ನಲ್ಲಿ ನಟಿಸಿಲ್ಲ. ‘ವಿಜಯಾನಂದ’ ಅವರು ನಟಿಸಿರುವ ಮಟ್ಟ ಮೊದಲ ನೈಜ ಜೀವನಾಧಾರಿತ ಚಿತ್ರವಾಗಿದ್ದು, ಅವರ ಪಾತ್ರವೂ ನಿಜ ವ್ಯಕ್ತಿಯಿಂದ ಸ್ಪೂರ್ತಿ ಪಡೆದಿದೆ. ತಲೆಗೆ ಬಟ್ಟೆ ಸುತ್ತಿಕೊಂಡು, ಪಠಾಣ್ ಸೂಟ್ನಲ್ಲಿ, ಐಷಾರಾಮಿ ಕಾರ್ನಿಂದ ಇಳಿದು ಬರುತ್ತಿದ್ದಂತೆಯೇ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ, ಜಯಘೋಷಗಳೊಂದಿಗೆ ತೆರೆಯ ಮೇಲೆ ಅವರನ್ನು ಸ್ವಾಗತಿಸುತ್ತಿದ್ದಾರೆ. ಡಾ. ವಿಜಯ ಸಂಕೇಶ್ವರ ಅವರು ಮೊದಲ ಲಾರಿ ಖರೀದಿಸಿ ಗದಗ ಮಾರುಕಟ್ಟೆಗೆ ಬರುವುದರಿಂದ ಹಿಡಿದು, ನಾಲ್ಕು ಲಾರಿ ಖರೀದಿಸಿ ಹುಬ್ಬಳ್ಳಿಯ ದೊಡ್ಡ ಮಾರುಕಟ್ಟೆಗೆ ಹೋಗುವವರೆಗೂ ಅವರ ಬೆಂಬಲವಾಗಿ ನಿಲ್ಲುವ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ. ರವಿಚಂದ್ರನ್ ಅವರ ವಿಶಿಷ್ಟ ಪಾತ್ರ, ಅದ್ಭುತ ಮ್ಯಾನರಿಸಂ ಮತ್ತು ಉತ್ತರ ಕರ್ನಾಟಕ ಶೈಲಿಯಲ್ಲಿ ಅವರ ಪಂಚಿಂಗ್ ಡೈಲಾಗ್ ಡೆಲಿವರಿಗೆ ಎಲ್ಲರೂ ಫಿದಾ ಆಗುತ್ತಿದ್ದಾರೆ.
ಸಿನಿಮಾ ತುಂಬ ಚೆನ್ನಾಗಿದೆ. ನಿರ್ದೇಶಕಿ ರಿಷಿಕಾ ಶರ್ಮಾ ಅವರು ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನನಗಂತೂ ತುಂಬ ಇಷ್ಟವಾಯಿತು. ಎಲ್ಲೂ ಬೋರ್ ಅನ್ನಿಸಲಿಲ್ಲ. ತುಂಬ ಇಂಟರೆಸ್ಟಿಂಗ್ ಆಗಿತ್ತು. | ಪ್ರಕಾಶ್ ಪ್ರೇಕ್ಷಕ ಸಿನಿಮಾ, ಕಥೆ ಎರಡೂ ಚೆನ್ನಾಗಿದೆ. ವಿಆರ್ಎಲ್ ಸಂಸ್ಥೆ ಯಾವ ರೀತಿ ಬಂತು. ವಿಜಯ ಸಂಕೇಶ್ವರ ಸರ್ ಎಷ್ಟೆಲ್ಲಾ ಕಷ್ಟ ಪಟ್ಟರು ಅಂತ ತಿಳಿದುಕೊಳ್ಳಬಹುದು. ಮತ್ತು ಟ್ರಾನ್ಸ್ಪೋರ್ಟ್ ಉದ್ಯಮ ನಡೆಸುವುದು ಎಷ್ಟು ಕಷ್ಟ, ಯಾವ ರೀತಿ ನಡೆಸಬೇಕು ಅಂತ ಐಡಿಯಾ ಬರುತ್ತದೆ. ಒಟ್ಟಾರೆ ಸಿನಿಮಾ ಅಂತೂ ತುಂಬ ಚೆನ್ನಾಗಿದೆ. | ಶ್ರೀನಿವಾಸ್ ಪ್ರೇಕ್ಷಕ ಸಿನಿಮಾ ಚೆನ್ನಾಗಿದೆ. ವಿಆರ್ಎಲ್ ಕಂಪನಿ ಬಗ್ಗೆ ರಿಯಲ್ ಸ್ಟೋರಿ ಮಸ್ತಾಗಿತ್ತು. | ಭರತ್ ಪ್ರೇಕ್ಷಕ ಮಧ್ಯಮ ವರ್ಗದ ಹುಡುಗರಿಗೆ ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ. ಎಲ್ಲರೂ ನೋಡಬೇಕಾದ ಸಿನಿಮಾ ‘ವಿಜಯಾನಂದ’. | ದರ್ಶನ್ ಪ್ರೇಕ್ಷಕ ಸಿನಿಮಾ ಚೆನ್ನಾಗಿದೆ, ನನಗೆ ತುಂಬ ಇಷ್ಟವಾಯಿತು. ಪ್ರತಿಯೊಂದು ಪಾತ್ರಗಳೂ ಇಷ್ಟವಾಗುತ್ತವೆ. ನಾವೇನೇ ಸಾಧನೆ ಮಾಡಬೇಕೆಂದರೂ ಸವಾಲುಗಳು ಅಡ್ಡ ಬರುತ್ತವೆ ಅನ್ನೋದನ್ನು ತೋರಿಸಿದ್ದಾರೆ. ಇವತ್ತು ವಿಜಯ ಸಂಕೇಶ್ವರ ಅವರು ಅಷ್ಟು ದೊಡ್ಡ ಸಾಧನೆ ಮಾಡಿದ್ದಾರೆ ಅಂದರೆ ಅದರ ಹಿಂದೆ ಶ್ರಮ, ಪ್ರಾಮಾಣಿಕತೆಯಿದೆ. ಹೊರಗಿನಿಂದ ನೋಡಿದವರು ದುಡ್ಡಿತ್ತು, ಸಾಧಿಸಿದ್ದಾರೆ ಅಷ್ಟೇ ಅಂತ ಅಂದುಕೊಳ್ಳಬಹುದು. ಆದರೆ, ಅವರು ಈ ಸಾಧನೆ ಮಾಡಲು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನೋದನ್ನು ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಸೆಂಟಿಮೆಂಟ್, ಎಮೋಷನ್ ಎಲ್ಲವೂ ಚಿತ್ರದಲ್ಲಿದೆ. ಸಾಮಾನ್ಯವಾಗಿ ಎಲ್ಲರೂ ಸಾಧನೆ ಮಾಡುವುದು ತುಂಬಾ ಈಸಿ ಅಂತಂದುಕೊಂಡುಬಿಟ್ಟಿರುತ್ತಾರೆ. ಅಥವಾ ಅಯ್ಯೋ ತುಂಬ ಕಷ್ಟಗಳು ಎದುರಾಗುತ್ತವೆ ಅಂತ ಸುಮ್ಮನಾಗಿಬಿಡುತ್ತಾರೆ. ಆದರೆ ಸಾಧಿಸಲೇಬೇಕು ಅಂತ ಛಲದಿಂದ ನಿಂತುಕೊಂಡರೆ, ಸಾಧಿಸಬಹುದು ಅಂತ ತುಂಬ ಚೆನ್ನಾಗಿ ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಎಲ್ಲರ ನಟನೆ ಕೂಡ ಚೆನ್ನಾಗಿದೆ. ಎಲ್ಲರೂ ಈ ಸಿನಿಮಾ ನೋಡಬೇಕು. ಯಾವ್ಯಾವುದೋ ಸಿನಿಮಾಗಳನ್ನು ನೋಡುವುದಕ್ಕಿಂತ ಇಂತಹ ಸಿನಿಮಾಗಳನ್ನು ನೋಡಬೇಕು. ಮಕ್ಕಳೊಂದಿಗೆ, ಕುಟುಂಬದ ಜತೆ ಬಂದು ಸಿನಿಮಾ ನೋಡಿ. ಒಂದೊಳ್ಳೆ ಸಂದೇಶ ಇರುವ ಚಿತ್ರ ‘ವಿಜಯಾನಂದ’. | ರೇಣುಕಾಪ್ರಸಾದ್ ಪ್ರೇಕ್ಷಕ