

ಬೆಂಗಳೂರು: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
2007ರಲ್ಲಿ ಶಬನಂ ಡೆವಲಪರ್ಸ್ ಸಂಸ್ಥೆ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ದಾಳಿ ನಡೆಸಿ ಇಬ್ಬರನ್ನು ಶೂಟೌಟ್ ಮಾಡಿ ಕೊಂದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಇಕ್ಲಾಕ್ ಖುರೇಷಿ(45) ಇದೀಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಉತ್ತರ ಪ್ರದೇಶದ ಮುಜಾಫರ್ ನಗರ ಮೂಲದ ಇಕ್ಲಾಕ್ ಖುರೇಷಿಯನ್ನು ಶಬನಂ ಡೆವಲಪರ್ಸ್ ಶೂಟೌಟ್ ಪ್ರಕರಣದಲ್ಲಿ ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದ ಆರೋಪಿ, ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಶಬನಂ ಡೆವಲಪರ್ಸ್ ಸಂಸ್ಥೆಯ ಇಬ್ಬರ ಶೂಟೌಟ್ಗೆ ತನ್ನ ಸಹಚರರ ಜೊತೆಗೂಡಿ ಇಕ್ಲಾಕ್ ಖುರೇಷಿ ಪಿಸ್ತೂಲ್ ಸಪ್ಲೈ ಮಾಡಿದ್ದ.