ಹಬ್ಬದಲ್ಲೂ ರಾಜಕೀಯ; ರಾವಣನ ಪ್ರತಿಕೃತಿಗೆ ಮೋದಿ ಫೋಟೋ ಅಂಟಿಸಿ ದಹನ..

ef
Published on

ನವದೆಹಲಿ: ದಸರಾ ಹಬ್ಬವನ್ನೂ ಈಗ ರಾಜಕೀಯವಾಗಿ ಬಳಸಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ನಡೆಯುವ ಸಂಪ್ರದಾಯವೊಂದನ್ನು ಪ್ರತಿಭಟನಾತ್ಮಕವಾಗಿ ಉಪಯೋಗಿಸಿಕೊಂಡಿದ್ದಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪಂಜಾಬ್​ನಲ್ಲಿ ಭಾನುವಾರ ರಾವಣನ ಪ್ರತಿಕೃತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಂಟಿಸಿ ದಹಿಸಿದ ಕಾಂಗ್ರೆಸ್​ ಕಾರ್ಯಕರ್ತರ ಕೃತ್ಯದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಂಜಾಬ್​ನಲ್ಲಿ ವಿವಿಧೆಡೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪ್ರತಿಭಟನಾ ನಿರತ ಕೆಲ ರೈತಸಂಘಟನೆಗಳು ದಸರಾ ಸಂದರ್ಭದಲ್ಲಿ ನಡೆಯುವ ರಾವಣ ದಹನ ಸಂಪ್ರದಾಯವನ್ನು ಆಕ್ರೋಶವನ್ನು ಹೊರಹಾಕಲು ಈ ರೀತಿಯಾಗಿ ಬಳಸಿಕೊಂಡಿದ್ದಾರೆ.

ಪಂಜಾಬ್​ನಲ್ಲಿ ರಾವಣನ ಪ್ರತಿಕೃತಿಗೆ ಮೋದಿಯ ಫೋಟೋ ಅಂಟಿಸಿ ದಹಿಸಿದ್ದು ನಾಚಿಕೆಗೇಡಿನ ಕೆಲಸ. ಇದು ರಾಹುಲ್​ ಗಾಂಧಿ ನಿರ್ದೇಶಿತ ನಾಟಕ. ನೆಹರು ಗಾಂಧಿ ವಂಶ ಪ್ರಧಾನಿ ಕಚೇರಿಗೆ ಎಂದೂ ಗೌರವ ಕೊಟ್ಟಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಜಾಬ್​ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ, ಪಂಜಾಬ್​ನಲ್ಲಿ ಪ್ರಧಾನಿ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ. ಇದು ಅಪಾಯಕಾರಿ ಬೆಳವಣಿಗೆ, ಇದರಿಂದ ದೇಶಕ್ಕೆ ಒಳ್ಳೆಯದಾಗಲ್ಲ. ಹೀಗಾಗಿ ಪ್ರಧಾನಿ ತಕ್ಷಣ ಅಲ್ಲಿನ ಜನರಿಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ರಾವಣ ಪ್ರತಿಕೃತಿ ದಹನ ರಾಜಕೀಯ ಸಂಘರ್ಷಕ್ಕೂ ಕಿಚ್ಚು ಹೊತ್ತಿಸಿದ್ದು, ಈಗ ಉಭಯಪಕ್ಷಗಳ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. (ಏಜೆನ್ಸೀಸ್​)

ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ: https://www.facebook.com/VVani4U/videos/975112776344055

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net