

ಬೆಂಗಳೂರು: ಸರ್ವರ್ ಹಾಗೂ ತಂತ್ರಾಂಶ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ವರ್ತಕರು ಬಯೋಮೆಟ್ರಿಕ್ ರಹಿತ ಫಲಾನುಭವಿಗಳಿಗೆ ಪಡಿತರ ವಿತರಿಸಬೇಕು ಎಂದು ಆಹಾರ ಇಲಾಖೆ ಸೋಮವಾರ ಸುತ್ತೋಲೆ ಹೊರಡಿಸಿದೆ. ಜ.30ರ ವರೆಗೆ ಪ್ರತಿ ದಿನ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಬೇಕು ಎಂದು ಸುತ್ತೂಲೆಯಲ್ಲಿ ಉಲ್ಲೇಖಿಸಲಾಗಿದೆ.
ಕೆಲ ವಿಭಾಗ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣಾ ಪ್ರಮಾಣದಲ್ಲಿ ಶೇ.75ಕ್ಕಿಂತ ಕಡಿಮೆ ಇದೆ. ಅಂಥವರು ಮ್ಯಾನುವಲ್ ಮೂಲಕವೇ ಪಡಿತರ ವಿತರಿಸಬೇಕು. ಅಲ್ಲದೆ, ಆಯಾ ದಿನ ಪಡಿತರ ವಿತರಿಸಿದ ಮಾಹಿತಿಯನ್ನು ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಬೇಕು.
ನಂತರ, ಆಯಾ ಜಿಲ್ಲೆಯ ಜಂಟಿ ಹಾಗೂ ಉಪ ನಿರ್ದೇಶಕರು ಸಂಗ್ರಹಿತ ಮಾಹಿತಿಯನ್ನು ಮುಖ್ಯ ಕಚೇರಿಗೆ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ 10 ದಿನ ಯಾವುದೇ ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಇಲಾಖೆ ಆಯುಕ್ತೆ ಶಮ್ಲಾ ಇಕ್ಬಾಲ್ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಫಲಾನುಭವಿಗಳಿಗೆ ಪಡಿತರ ವಿತರಿಸಿದ ಬಳಿಕ ಫೆ.1ರಿಂದ ಇ-ಕೆವೈಸಿಗೆ ಮತ್ತೆ ಚಾಲನೆ ನೀಡಲಾಗುವುದು. | ಶಮ್ಲಾ ಇಕ್ಬಾಲ್ ಆಹಾರ ಇಲಾಖೆ ಆಯುಕ್ತೆ