ಜನರಿಗೊಂದು ಅವಕಾಶ, ಇಂದಿನಿಂದ ಪಡಿತರ ಚೀಟಿ ತಿದ್ದುಪಡಿ ಶುರು

muniyappa
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ಶನಿವಾರದಿಂದ ಮತ್ತೆ ಆರಂಭವಾಗಲಿದೆ. ಆಂದೋಲನ ರೂಪದಲ್ಲಿ ಕೈಗೆತ್ತಿಕೊಂಡು ಒಂದು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳಿಸುವ ಗಡುವು ವಿಧಿಸಲಾಗಿದೆ.

ಪಡಿತರ ಚೀಟಿ ತಿದ್ದುಪಡಿ/ ಸೇರ್ಪಡೆ/ ರದ್ದು ಬಯಸಿದ 3,18,907 ಅರ್ಜಿಗಳು ಬಾಕಿಯಿವೆ. ಹೊಸದಾಗಿ ಪರಿಷ್ಕರಣೆಗೆ ಬಯಸಿದವರಿಗೂ ಅವಕಾಶ ನೀಡಲಾಗುತ್ತದೆ. ಆಯಾ ತಹಸೀಲ್ ಕಚೇರಿಯಲ್ಲಿ ಇಲಾಖೆ ಸಿಬ್ಬಂದಿ ಬಿಡಾರ ಹೂಡಿ ಅರ್ಜಿ ಸ್ವೀಕರಿಸಿ ಇತ್ಯರ್ಥಪಡಿಸಲಿದ್ದಾರೆ.

ಜನನ ಸೇರ್ಪಡೆ, ನಿಧನ ರದ್ದು, ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಜೋಡಣೆ ಇತ್ಯಾದಿ ವಿಷಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಕುಟುಂಬ ತಂತ್ರಾಂಶದ ನೆರವು ಬಳಸಿಕೊಂಡು ಪಡಿತರ ಚೀಟಿಯಲ್ಲಿನ 3,64,051 ಮೃತರ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಶುಕ್ರವಾರ ತಿಳಿಸಿದರು.

ಅಧ್ಯಯನ

ಆಂಧ್ರಪ್ರದೇಶ ಮಾದರಿಯಲ್ಲಿ ಪಡಿತರ ಮತ್ತು ಆರೋಗ್ಯಕ್ಕೆ ಎ ಮತ್ತು ಬಿ ವರ್ಗೀಕೃತ ಬಿಪಿಎಲ್ ರೇಷನ್ ಕಾರ್ಡ್ ವಿತರಣೆಗೆ ಚಿಂತನೆಯಿದೆ. ಇದಕ್ಕಾಗಿ ಇಲಾಖೆ ಅಧಿಕಾರಿಗಳ ತಂಡ ಆಂಧ್ರಕ್ಕೆ ತೆರಳಿ ಅಧ್ಯಯನ ನಡೆಸಲಿದೆ. ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮವಹಿಸಲಾಗುವುದು.

ಸದ್ಯಕ್ಕೆ ಹೊಸದಾಗಿ ಪಡಿತರ ಚೀಟಿ ಕೋರಿದ 2,95,986 ಅರ್ಜಿಗಳು ಬಾಕಿಯಿವೆ. ಈ ಅರ್ಜಿಗಳ ಸ್ಥಳ ಪರೀಶಿಲನೆ ನಡೆಸಿ ಅರ್ಹ ಬಗ್ಗೆ ಮಾಹಿತಿ ಪಡೆದು, ಆರ್ಥಿಕ ಇಲಾಖೆಯೊಂದಿಗೆ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ವಿವರಿಸಿದರು.

ಪಡಿತರ ಬೇಡವೆಂದು ತುರ್ತು ವೈದ್ಯಕೀಯ ಕಾರಣಗಳಿಗೆ ಅಗತ್ಯವಿದೆ ಎನ್ನುವವರಿಗೆ ಹೊಸ ಪಡಿತರ ಚೀಟಿ ವಿತರಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಪರಿಶೀಲನೆ ಕಾಲಕ್ಕೆ ಅರ್ಜಿದಾರರಿಂದ ಮಾಹಿತಿ ಸಂಗ್ರಹಿಸಲಿದ್ದು, ಆರೋಗ್ಯ ಉದ್ದೇಶಕ್ಕಾಗಿ ಕೊಡಿ ಎಂದು ಕೇಳಿದರೆ ಅಂತಹವರಿಗೆ ಹೊಸ ಪಡಿತರ ಕಾರ್ಡ್ ವಿತರಣೆಗೆ ಅನುಮತಿ ನೀಡಲಾಗುವುದು ಎಂದರು.

ಹಳದಿ ಬೋರ್ಡ್‌ವುಳ್ಳ ನಾಲ್ಕು ಚಕ್ರಗಳ ವಾಹನಗಳ ಮಾಲೀಕರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಸಮಸ್ಯೆಯಿಲ್ಲ. ಆದರೆ ಸ್ವಂತ ಬಳಕೆಗೆ ಕಾರ್ ಇನ್ನಿತರ ನಾಲ್ಕು ಚಕ್ರಗಳ ವಾಹನ ಇಟ್ಟುಕೊಂಡವರಿಗೆ ಬಿಪಿಎಲ್ ಕಾರ್ಡ್ ಅಗತ್ಯವೇನಿದೆ ? ಎಂದು ಮುನಿಯಪ್ಪ ಪ್ರಶ್ನಿಸಿದರು.

566 ಕೋಟಿ ರೂ. ಪಾವತಿ

ಹೆಚ್ಚುವರಿ ಐದು ಕೆಜಿ ಅಕ್ಕಿಗೆ ನಗದು ನೀಡುವ ಪ್ರಕ್ರಿಯೆ ಶುರುವಾದ 25 ದಿನಗಳಲ್ಲಿ ಒಂದು ಕೋಟಿ ಪಡಿತರ ಚೀಟಿದಾರ ಬ್ಯಾಂಕ್ ಖಾತೆಗೆ 566 ಕೋಟಿ ರೂ. ನಗದು ನೇರ ವರ್ಗಾವಣೆಯಾಗಿದೆ.

ಉಳಿದ 28 ಲಕ್ಷ ಕುಟುಂಬಗಳ ಪೈಕಿ 5.32 ಲಕ್ಷ ಅಂತ್ಯೋದಯ ಅನ್ನ ಪಡಿತರ ಚೀಟಿದಾರರು ಮೂರು ತಿಂಗಳಿಂದ ಪಡಿತರ ಪಡೆದಿಲ್ಲ. 3.40 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲ, ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಜೋಡಣೆಯಾಗದ ಪಡಿತರ ಚೀಟಿಗಳ ಸಂಖ್ಯೆ 19.27 ಲಕ್ಷದಷ್ಟಿದೆ.

ಎಲ್ಲರಿಗೂ ಮಾಹಿತಿ ನೀಡಲಾಗುತ್ತಿದ್ದು, ಅಂಚೆ ಇಲಾಖೆ ನೆರವಿನೊಂದಿಗೆ 15-20 ದಿನಗಳೊಳಗೆ 1.19 ಲಕ್ಷ ಹೊಸ ಬ್ಯಾಂಕ್ ಖಾತೆ ತೆರೆಯಲಾಗಿದೆ. 54,349 ಲಾನುಭವಿಗಳ ಆಧಾರ್ ಸಂಖ್ಯೆ ಪಡಿತರ ಚೀಟಿಗೆ ಜೋಡಿಸಲಾಗಿದೆ.

ಆದರೆ ಇವರೆಲ್ಲರಿಗೂ ಹಿಂಬಾಕಿ ನಗದು ಸಿಗುವುದಿಲ್ಲ, ಆಗಸ್ಟ್‌ನ ಮೊತ್ತ ಸಿಗಲಿದೆ. ಬಾಕಿಯಿರುವ ಕಾರ್ಡ್‌ಗಳು ಜೋಡಣೆ ಪ್ರಕ್ರಿಯೆ ಮುಗಿಸಿದ ಮುಂದಿನ ತಿಂಗಳಿಂದ ನಗದು ಲಭಿಸುತ್ತದೆ.

ಪಡಿತರಚೀಟಿದಾರರಿಗೆ ಪೂರ್ವ ಮಾಹಿತಿ ನೀಡಿದ್ದರೂ ಪಡಿತರ ಚೀಟಿಗೆ ಆಧಾರ್, ಬ್ಯಾಂಕ್ ಖಾತೆ ಜೋಡಣೆ ಮಾಡದ ಕಾರಣ ಜುಲೈನ ನಗದು ಮೊತ್ತದಿಂದ ವಂಚಿತರಾಗಿದ್ದು, ಸರ್ಕಾರದ ತಪ್ಪಲ್ಲ ಎಂದು ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net