

Tirumala: ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಫೆ.4ರಿಂದ ರಥಸಪ್ತಮಿ ಆಚರಣೆ ನಡೆಯುತ್ತಿದೆ. ಇನ್ನು ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಾರಿ ಪ್ರಮಾಣದ ಭಕ್ತರು ಸೇರುವ ನಿರೀಕ್ಷೆ ಇದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ತಿರುಮಲ ತಿರುಪತಿ ದೇವಸ್ಥಾನದಲ್ಲಿನ ಎಲ್ಲ ತರಹದ ದರ್ಶನ ರದ್ದು ಮಾಡಲಾಗಿದೆ ಎಂದು ತಿರುಮಲ ಆಡಳಿತ ಮಂಡಳಿ(TTD) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಫೆ.4ರಂದು ಬೆಳಗ್ಗೆ ಸೂರ್ಯಪ್ರಭ ವಾಹನ ಸೇವೆಯೊಂದಿಗೆ ಉತ್ಸವವು ಆರಂಭವಾಗಿ, ರಾತ್ರಿ ಚಂದ್ರಪ್ರಭ ವಾಹನ ಸೇವೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಗ್ಯಾಲರಿಗಳಲ್ಲಿ 2 ಲಕ್ಷ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. 130 ಗ್ಯಾಲರಿಗಳಲ್ಲಿ ವಿಶೇಷ ಆಹಾರ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಗಳು ತಿಳಿಸಿದ್ದಾರೆ.
ಸೆಲೆಬ್ರಿಟಿಗಳನ್ನು ಹೊರತುಪಡಿಸಿ ಎನ್‌ಆರ್‌ಐಗಳು, ಪಾಲಕರು, ಮಕ್ಕಳು, ಹಿರಿಯ ನಾಗರಿಕರು ಮತ್ತು ಅಂಗವಿಕಲರ ದರ್ಶನವನ್ನು ರದ್ದುಗೊಳಿಸಲಾಗಿದೆ. ಸುಮಾರು ಎರಡು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಗ್ಯಾಲರಿಗಳಲ್ಲಿ ತಂಗಿರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)