ರತನ್ ಪಾಲು ಮಲಸಹೋದರಿಯರಿಗೆ

5-67a8f06c39b73
Published on

ನವದೆಹಲಿ: ಉದ್ಯಮಿ ರತನ್ ಟಾಟಾ ನಿಧನಾನಂತರ ಟಾಟಾ ಸಮೂಹ ಸಂಸ್ಥೆಗಳ ಷೇರುಗಳನ್ನು ಹಕ್ಕುಬದ್ಧವಾಗಿ ಪಡೆದಿರುವ ರತನ್ ಟಾಟಾ ಎಂಡೋಮೆಂಟ್ ಫೌಂಡೇಷನ್ (ಆರ್​ಟಿಇಎಫ್) ಮತ್ತು ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್ (ಆರ್​ಟಿಇಟಿ) ಇದೀಗ ಪುನಾರಚನೆಗೆ ಸಜ್ಜಾಗಿವೆ.

ರತನ್ ಟಾಟಾ ಅವರ ಮಲಸಹೋದರಿಯರಾದ ಶಿರೀನ್ ಮತ್ತು ಡಿಯಾನ್ ಜೇಜೀಭಾಯ್ ಅವರು ನೋಯೆಲ್ ಟಾಟಾ ಜತೆಗೆ ಈ ಟ್ರಸ್ಟ್ ಗಳಿಗೆ ಟ್ರಸ್ಟಿಯಾಗಿ ಸೇರ್ಪಡೆ ಆಗಲಿದ್ದಾರೆ. ಈ ಮೂಲಕ ಟಾಟಾ ಸಮೂಹ ಸಂಸ್ಥೆಗಳಲ್ಲಿ ಕುಟುಂಬದ ಪಾರಮ್ಯ ಮುಂದುವರಿಯಲಿದೆ ಎಂದು ವರದಿಯಾಗಿದೆ. ರತನ್ ಟಾಟಾ ಅವರ ಸಂಪತ್ತಿನ ಪಾಲನೆಗಾಗಿ ಇವೆರಡೂ ಟ್ರಸ್ಟ್​ಗಳನ್ನು ಕಾನೂನುಬದ್ಧವಾಗಿ ಕೆಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. 2024ರ ಅಕ್ಟೋಬರ್​ನಲ್ಲಿ ನಿಧನರಾದ ರತನ್, ಈ ಸಮೂಹದ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್​ನಲ್ಲಿ ಶೇ. 0.83 ಪಾಲು ಹೊಂದಿದ್ದರಲ್ಲದೆ, ಟಾಟಾ ಡಿಜಿಟಲ್, ಟಾಟಾ ಮೋಟರ್ಸ್, ಟಾಟಾ ಟೆಕ್ನಾಲಜೀಸ್​ನಲ್ಲೂ ಷೇರು ಹೊಂದಿದ್ದರು. ಆ ಷೇರುಗಳನ್ನು ವಿಲ್​ನಲ್ಲಿ ಆರ್​ಟಿಇಎಫ್​ಗೆ ಬರೆದಿದ್ದಾರೆ. ಸ್ಟಾರ್ಟಪ್​ಗಳಲ್ಲಿನ ಹೂಡಿಕೆಗಳು ಆರ್​ಟಿಇಟಿಯಲ್ಲಿ ವಿಲೀನವಾಗುತ್ತವೆ ಇಲ್ಲವೇ ನೇರವಾಗಿ ಟ್ರಸ್ಟ್​ಗೆ ವರ್ಗಾವಣೆಯಾಗುತ್ತವೆ.

ಅವರ ಎಸ್ಟೇಟ್ 10 ಸಾವಿರ ಕೋಟಿ ರೂ. ಬೆಲೆ ಬಾಳುತ್ತದೆ. ಆರ್​ಟಿಇಎಫ್ ಸೆಕ್ಷನ್ 8 ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತದೆ, ಆರ್​ಟಿಇಟಿ ಭಾರತೀಯ ಟ್ರಸ್ಟ್​ಗಳ ಕಾಯ್ದೆಯಡಿ ಕೆಲಸ ಮಾಡುತ್ತದೆ. ಎರಡೂ ಸಂಸ್ಥೆಗಳು ಶಿಕ್ಷಣ, ಆರೋಗ್ಯ ಸೇವೆ, ಬಡವರ ಉನ್ನತಿಗೆ ಸಮರ್ಪಿತವಾಗಿವೆ. ಇವು ರತನ್ ಟಾಟಾ ಅವರ ಅತ್ಯಂತ ಇಷ್ಟದ ಕಾರ್ಯಗಳಾಗಿದ್ದವು. ಎರಡೂ ಟ್ರಸ್ಟ್​ಗಳಿಗೆ ಅವುಗಳ ಪಾಲಿಗೆ ಅನುಗುಣವಾಗಿ ಟಾಟಾ ಸಮೂಹದಲ್ಲಿ ಮತದಾನದ ಹಕ್ಕು ಇದೆ. ಎರಡೂ ಸಂಸ್ಥೆಗಳಲ್ಲಿ ಸದ್ಯಕ್ಕೆ ಇಬ್ಬಿಬ್ಬರು ಟ್ರಸ್ಟಿಗಳ ವ್ಯವಸ್ಥೆ ಇದ್ದು, ಈ ಸಂಖ್ಯೆಯನ್ನು ಆರ್​ಟಿಇಎಫ್​ನಲ್ಲಿ ಆರಕ್ಕೆ ಮತ್ತು ಆರ್​ಟಿಇಟಿಯಲ್ಲಿ ಏಳಕ್ಕೆ ವಿಸ್ತರಿಸಲಾಗುತ್ತಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಎರಡೂ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net