

ಮುಂಬೈ: ಇತ್ತೀಚೆಗಷ್ಟೇ ಅಗಲಿರುವ ದಿಗ್ಗಜ ಉದ್ಯಮಿ, ಟಾಟಾ ಸನ್ಸ್ನ ಎಮಿರಿಟಸ್ ಚೇರ್ಮನ್ ರತನ್ ಟಾಟಾ ಅವರು ತಮ್ಮ ವಿಲ್ನಲ್ಲೂ ಶ್ವಾನಪ್ರೇಮ ಮೆರೆದಿದ್ದಾರೆ. ತಮ್ಮ ಆಸ್ತಿಗಳ ಮುಂದಿನ ಪರಭಾರೆ ಸಂಬಂಧ ಅವರು ಬರೆದಿಟ್ಟಿರುವ ವಿಲ್ನಲ್ಲಿ ತಮ್ಮ ನೆಚ್ಚಿನ ಶ್ವಾನ ‘ಟಿಟೊ’ಗೆ ಯಾವುದೇ ಮಿತಿ ಇರದೇ ಆರೈಕೆ ನೀಡಬೇಕು ಎಂಬು ದನ್ನು ಉಲ್ಲೇಖಿಸಿದ್ದಾರೆ. ಟಾಟಾ ಅವರ ಮೊದಲಿನ ನಾಯಿಯೊಂದು ಸಾವಿಗೀಡಾದ ಬಳಿಕ 6 ವರ್ಷಗಳ ಹಿಂದೆ ಟಿಟೊವನ್ನು ಸಾಕಲು ಆರಂಭಿಸಲಾಗಿತ್ತು. ಟಿಟೊ ಆರೈಕೆಯನ್ನು ಟಾಟಾ ಅವರ ಸುದೀರ್ಘ ಕಾಲದ ಬಾಣಸಿಗ ರಾಜನ್ ಷಾ ನೋಡಿಕೊಳ್ಳಲಿದ್ದಾರೆ. ರತನ್ ಟಾಟಾ ಅವರು ಜೀವನದುದ್ದಕ್ಕೂ ಬೀದಿನಾಯಿಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು, ಅವುಗಳ ಆರೈಕೆಗೆ ವಿಶೇಷ ಕಾಳಜಿ ವಹಿಸಿದ್ದರು.
ವರದಿಯೊಂದರ ಪ್ರಕಾರ, ಟಾಟಾ ಅವರ ಆಸ್ತಿ 10 ಸಾವಿರ ಕೋಟಿ ರೂಪಾಯಿಗೂ ಮೀರಿದ್ದು ಎನ್ನಲಾಗಿದ್ದು, ಅದರಲ್ಲಿ ಅವರ ಪ್ರತಿಷ್ಠಾನ, ಸಹೋದರ ಜಿಮ್ಮಿ ಟಾಟಾ, ಮಲ-ಸಹೋದರಿಯರಾದ ಶಿರೀನ್, ಡೀನಾ ಜಿಜೀಭೊಯ್ ಹಾಗೂ ಮನೆಯ ಕೆಲಸದವರಿಗೂ ಹಂಚಲಾಗಿದೆ. ತಮ್ಮೊಂದಿಗೆ ಮೂರು ದಶಕಗಳ ಕಾಲ ಬಾಂಧವ್ಯ ಹೊಂದಿರುವ ಮನೆಯ ಹಿರಿಯ ಆಳು ಸುಬ್ಬಯ್ಯ ಹೆಸರನ್ನೂ ಟಾಟಾ ವಿಲ್ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಟಾಟಾ ಅವರ ಕಚೇರಿಯಲ್ಲಿ ಪ್ರಮುಖ ಹುದ್ದೆ ಹೊಂದಿ ರುವ, ರತನ್ ಅವರ ನೆಚ್ಚಿನ ಶಂತನು ನಾಯ್ಡುಗೂ ವಿಲ್ನಲ್ಲಿ ಪಾಲು ಉಲ್ಲೇಖಿಸಲಾಗಿದೆ.
ಪ್ರಮುಖ ಆಸ್ತಿಗಳು: ಮಹಾರಾಷ್ಟ್ರದ ಅಲಿಬಾಗ್ನಲ್ಲಿರುವ 2 ಸಾವಿರ ಚದರಡಿಯ ಬೀಚ್ ಬಂಗಲೆ, ಮುಂಬೈನ ಜುಹೂ ತಾರಾ ರಸ್ತೆಯಲ್ಲಿನ ಎರಡು ಮಹಡಿಯ ನಿವಾಸ, 350 ಕೋಟಿ ರೂ. ನಿಶ್ಚಿತ ಠೇವಣಿ ಟಾಟಾ ಅವರ ಹೆಸರಿನಲ್ಲಿರುವ ಕೆಲವು ಪ್ರಮುಖ ಆಸ್ತಿಗಳಾಗಿವೆ. 165 ಶತಕೋಟಿ ಡಾಲರ್ ಟಾಟಾ ಸಮೂಹದ ಮಾತೃಸಂಸ್ಥೆ ಟಾಟಾ ಸನ್ಸ್ನಲ್ಲಿ ರತನ್ ಟಾಟಾ ಶೇ. 0.83 ಷೇರುಗಳನ್ನು ಹೊಂದಿದ್ದಾರೆ. ಷೇರುಗಳನ್ನು ಚಾರಿಟಬಲ್ ಟ್ರಸ್ಟ್ಗಳಿಗೆ ನೀಡುವ ಟಾಟಾ ಗ್ರೂಪ್ನ ಪರಂಪರೆ ಪ್ರಕಾರ ರತನ್ ಅವರ ಟಾಟಾ ಸನ್ಸ್ನಲ್ಲಿನ ಷೇರುಗಳು ರತನ್ ಟಾಟಾ ಎಂಡೋಮೆಂಟ್ ಫೌಂಡೇಷನ್(ಆರ್ಟಿಇಎಫ್)ಗೆ ಹೋಗಲಿವೆ. ರತನ್ ಟಾಟಾ ಅವರು ತಮ್ಮ ಜೀವನದ ಕೊನೆಯವರೆಗೂ ವಾಸಿಸಿದ್ದ ಮುಂಬೈನ ಕೊಲಬಾದ ಹಲೆಕೈ ಮನೆಯನ್ನು ಟಾಟಾ ಸನ್ಸ್ ಅಂಗಸಂಸ್ಥೆಯಾದ ಎವಾರ್ಟ್ ಇನ್ವೆಸ್ಟ್ಮೆಂಟ್ಸ್ ಅಧೀನದಲ್ಲಿದ್ದು, ಆ ಮನೆಯ ಭವಿಷ್ಯವನ್ನು ಅದೇ ನಿರ್ಧರಿಸಲಿದೆ ಎನ್ನಲಾಗಿದೆ.ರತನ್ ಅವರ 20-30 ಐಷಾರಾಮಿ ವಾಹನಗಳು ಹಲೆಕೈ ನಿವಾಸ ಹಾಗೂ ಕೊಲಬಾದ ತಾಜ್ ವೆಲ್ಲಿಂಗ್ಟನ್ ಮ್ಯೂಸ್ ಸರ್ವಿಸ್ ಅಪಾರ್ಟ್ವೆುಂಟ್ಗಳಲ್ಲಿದ್ದು, ಆ ಕುರಿತು ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ರತನ್ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಜುಹೂನಲ್ಲಿನ ಕಾಲು ಎಕರೆ ಜಮೀನು ಮಾರಾಟಕ್ಕೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.