ಕೊಡಗು ಮೂಲದ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ದಿನದಿಂದ ದಿನಕ್ಕೆ ಪ್ರಭಾವ, ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಗಣೇಶ್, ಪುನೀತ್ ರಾಜಕುಮಾರ್, ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಅಲ್ಲು ಅರ್ಜುನ್, ರಣಬೀರ್ ಕಪೂರ್ ಸೇರಿ ಹಲವು ಸ್ಟಾರ್ ನಟರ ಜತೆ ತೆರೆಹಂಚಿಕೊಂಡಿರುವ ಅವರು ‘ನ್ಯಾಷನಲ್ ಕ್ರಶ್’ ಪಟ್ಟ ಅಲಂಕರಿಸಿದ್ದಾರೆ. ಸದ್ಯ ರಶ್ಮಿಕಾ ನಟನೆಯ ಹಿಂದಿಯ ‘ಕಾಕ್‌ಟೇಲ್ 2’ ಇದೇ 19ಕ್ಕೆ ರಿಲೀಸ್ ಆಗುತ್ತಿದೆ. ಇನ್ನು ವಿಜಯ್ ದೇವರಕೊಂಡ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ರಿಲೀಸ್ ಆಗುತ್ತಿರುವ ನಟಿಯ ಮೊದಲ ಚಿತ್ರ ಇದಾಗಿದ್ದು, ಈ ಹಿನ್ನೆಲೆಯಲ್ಲಿ ರಶ್ಮಿಕಾ ಈ ಸಿನಿಮಾ ವಿಶೇಷವಾದುದು. ಟ್ರೇಲರ್, ಹಾಡು ಮೂಲಕ ಸದ್ದು ಮಾಡುತ್ತಿರುವ ಈ ಸಿನಿಮಾ ನಟ-ನಟಿಯರ ಸಂಭಾವನೆ ವಿಚಾರವಾಗಿಯೂ ಇದೀಗ ಗಮನ ಸೆಳೆಯುತ್ತಿದೆ. ಮೂಲಗಳ ಪ್ರಕಾರ ಈ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಆ ಮೂಲಕ ಅವರು ತಮ್ಮ ಸಂಭಾವನೆಯನ್ನು ಎರಡು ಪಟ್ಟು ಹೆಚ್ಚಿಸಿಕೊಂಡಂತಾಗಿದೆ. ಈ ಹಿಂದಿನ ‘ಸಿಕಂದರ್’, ‘ಥಮಾ’ ಚಿತ್ರಕ್ಕೆ 5 ಕೋಟಿ ರೂ. ಪಡೆದಿದ್ದರು ಎನ್ನಲಾಗಿದೆ. ಹೀಗೆ ರಶ್ಮಿಕಾ ಸಿನಿಮಾದಿಂದ ಸಿನಿಮಾಕ್ಕೆ ಪ್ರಭಾವ ಹೆಚ್ಚಳದ ಜತೆಗೆ ಸಂಭಾವನೆಯನ್ನು ಏರಿಕೆ ಮಾಡಿಕೊಂಡು ಬಂದಿದ್ದಾರೆ. ತೆಲುಗಿನ ‘ಪುಷ್ಪ: ದ ರೈಸ್’ಗೆ 2 ಕೋಟಿ ರೂ., ‘ಸೀತಾರಾಮಂ’ಗೆ 3 ಕೋಟಿ ರೂ, ಹಿಂದಿಯ ‘ಗುಡ್‌ಬೈ’ಗೆ 4ಕೋಟಿ, ‘ಅನಿಮಲ್’ಗೆ 5 ಕೋಟಿ ಸಂಭಾವನೆ ಪಡೆದಿದ್ದರಂತೆ. ‘ಅನಿಮಲ್’ ಬಳಿಕ ಎರಡು-ಮೂರು ಚಿತ್ರಗಳಿಗೆ 5 ಕೋಟಿ ಪಡೆದಿದ್ದ ಅವರು ಇದೀಗ ‘ಕಾಕ್‌ಟೇಲ್ 2’ಗೆ ಏಕಾಏಕಿ ಎರಡು ಪಟ್ಟು ಸಂಭಾವನೆ ಏರಿಕೆ ಮಾಡಿಕೊಂಡು, 15 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಇದೇ ಚಿತ್ರಕ್ಕೆ ನಾಯಕ ಶಾಹಿದ್ ಕಪೂರ್ 34 ಕೋಟಿ, ಮತ್ತೊಬ್ಬ ನಾಯಕನಟಿ ಕೃತಿ ಸನನ್ ಕೂಡ 15 ಕೋಟಿ ರೂ. ಸ್ಯಾಲರಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. -ಏಜೆನ್ಸೀಸ್