

ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ತಾಲೂಕಿನ ಕುಕ್ಕೂರು ಗ್ರಾಮದಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದ ಬಳಿಕ ತೀವ್ರ ನೊಂದುಕೊಂಡಿದ್ದಾರೆ. ತಮ್ಮ ಕನಸಿನ ಯೋಜನೆಗೆ ಬ್ರೇಕ್ ಹಾಕಿದ್ದಾರೆ.
ಅಂತಾರಾಷ್ಟ್ರೀಯ ಗುಣಮಟ್ಟದ ಬಾಲಕಿಯರ ವಸತಿ ಶಾಲೆ, ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ, ಜನಸಾಮಾನ್ಯರು ಹಾಗೂ ಶ್ರೀಮಂತರಿಗೆ ಪ್ರತ್ಯೇಕವಾಗಿ ಚಲನಚಿತ್ರ ವೀಕ್ಷಿಸಲು ಯೋಗ್ಯವಾದ ಚಿತ್ರ ಮಂದಿರ ನಿರ್ಮಾಣ ಮಾಡುವುದು ರಶ್ಮಿಕಾ ಕನಸಾಗಿತ್ತು. ಅದಕ್ಕಾಗಿ ತಂದೆ ಮೂಲಕ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಎಕರೆ ಜಾಗ ಖರೀದಿಸಿದ್ದರು. ಕೋಟ್ಯಂತರ ರೂ. ವಿನಿಯೋಗಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆ ಕಟ್ಟುತ್ತಿದ್ದಾರೆ.
ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆಂಬ ದೂರು ಕೊಡಗಿನಿಂದ ನವ ದೆಹಲಿಯ ಐಟಿ ಕಚೇರಿಗೆ ರವಾನೆಯಾಗಿತ್ತು. ಈ ದೂರಿನ ಆಧಾರದಲ್ಲಿ ದಾಳಿ ನಡೆದಿರುವ ಮಾಹಿತಿ ಐಟಿ ಮೂಲದಿಂದ ಕುಟುಂಬಕ್ಕೆ ಲಭ್ಯವಾಗಿದೆ. ಇದರಿಂದ ರಶ್ಮಿಕಾ ಮತ್ತು ಕುಟುಂಬದವರು ಬೇಸರಗೊಂಡಿದ್ದಾರೆ.
‘ನೀವು ಇರುವಾಗಲೇ ನನಗೆ ತೊಂದರೆ ನೀಡಿರುವ ಜನ, ನಿಮ್ಮ ನಂತರ ನನಗೆ ತೊಂದರೆ ನೀಡದೆ ಇರುತ್ತಾರಾ? ಅದಕ್ಕಾಗಿ ನನ್ನ ಗಳಿಕೆಯನ್ನು ಕೊಡಗಿನಲ್ಲಿ ವಿನಿಯೋಗಿಸುವುದಿಲ್ಲ’ ಎಂದು ಹೇಳುವ ಮೂಲಕ ತನ್ನ ಮಗಳು ನೋವು ತೋಡಿಕೊಂಡಿದ್ದಾಳೆ ಎಂದು ಮದನ್ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಯೋಜನೆ ರೂಪಿಸಿದ್ದ ಜಾಗದಲ್ಲಿ ಕೋಳಿ, ಹಸು ಸಾಕಲು ನಿರ್ಧರಿಸಿದ್ದೇವೆ ಎಂದು ಮದನ್ ಹೇಳಿದ್ದಾರೆ.