10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿ ಅದ್ಭುತ; ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಯನ್ನು ಹಾಡಿ ಹೊಗಳಿದ ರಶ್ಮಿಕಾ

rashmika mandanna
Published on

ಮುಂಬೈ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಐದನೇ ಹಂತದ ಮತದಾನಕ್ಕೆ ಕೆಲವೇ ದಿನಗಳ ಬಾಕಿ ಉಳಿದಿವೆ. ಇನ್ನೂ ಈ ನಡುವೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದೇಶದಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳ ಕುರಿತು ಮಾತನಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರಶ್ಮಿಕಾ, ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಸಾಧ್ಯವಾಗಿರೋದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹೀಗೆ ಪ್ರಯಾಣಿಸುವುದನ್ನು ಸುಲಭ ಮಾಡಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ.

ಭಾರತ ಈಗ ವೇಗವಾಗಿ ಸಾಗುತ್ತಿದೆ. ಎಲ್ಲೂ ನಿಲ್ಲುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಗತಿ ಎಂಬುದು ಬಹಳ ವೇಗವಾಗಿ ಆಗುತ್ತಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದು ಹೇಳಲು ಬಯಸುತ್ತೇನೆ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು. ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರ ಸಾಧನೆಯನ್ನು ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ್ದಾರೆ.

ಇತ್ತ ರಶ್ಮಿಕಾ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ವ್ಯಕ್ತವಾಗುತ್ತಿದೆ. ಚುನಾವಣೆ ಸಮಯದಲ್ಲಿ ಪರೋಕ್ಷವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೀರಾ. ಮೊದಲು ವೋಟ್​ ಮಾಡಿ ಆ ನಂತರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net