ವಿದೇಶಗಳಲ್ಲಿ ದೌರ್ಜ್ಯನ್ಯಕ್ಕೊಳಗಾಗುವ ಹಿಂದುಗಳ ಪರ ಧ್ವನಿ ಹೆಚ್ಚಾಗಬೇಕು: ರಶ್ಮಿ ಸಾಮಂತ್

Rashmi Savanth
Published on

ಬೆಂಗಳೂರು: ಸಾವಿರಕ್ಕಿಂತಲೂ ಅಧಿಕ ವರ್ಷಗಳ ಇತಿಹಾಸವಿರುವ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಳೆದ 100 ವರ್ಷಗಳ ಹಿಂದಷ್ಟೇ ಮಹಿಳೆಯರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆತಿದೆ. ಇಂತಹ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಒಬ್ಬ ಹಿಂದು ಹೆಣ್ಣುಮಗಳು ಅಲ್ಲಿನ ವಿದ್ಯಾರ್ಥಿ ಸಂಘದ ನಾಯಕಿಯಾಗುವುದನ್ನು ಸಹಿಸಲಿಲ್ಲ. ಹಾಗಾಗಿ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಐತಿಹಾಸಿಕ ವಿಜಯವನ್ನು ಪಡೆದರೂ ಆಯ್ಕೆಯಾದ ವಾರದೊಳಗೆ ನಾನು ಹಿಂದು ಎನ್ನುವ ಕಾರಣಕ್ಕೆ ಟೀಕಾಪ್ರಹಾರಗಳಿಗೆ ಗುರಿಯಾಗಿ, ಒತ್ತಾಯಪೂರ್ವಕವಾಗಿ ವಿದ್ಯಾರ್ಥಿ ಸಂಘಕ್ಕೆ ರಾಜೀನಾಮೆ ನೀಡುವಂತೆ ಮಾಡಲಾಯಿತು ಎಂದು ಲೇಖಕಿ ರಶ್ಮಿ ಸಾಮಂತ್ ಹೇಳಿದರು.

ನಗರದ ಬಸವನಗುಡಿಯ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಥಿಂಕರ್ಸ್ ಫೋರಮ್ ಆಯೋಜಿಸಿದ್ದ ‘ಎ ಹಿಂದೂ ಇನ್ ಆಕ್ಸ್ ಫರ್ಡ್’ ಕೃತಿ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ನನ್ನ ವಿಜಯವನ್ನು ಸಂಭ್ರಮಿಸುವಾಗ ಇದ್ದ ಸಂಖ್ಯೆ, ನನಗಾದ ಅನ್ಯಾಯದ ವಿರುದ್ಧ ಮಾತನಾಡುವಾಗ ಕ್ಷೀಣಿಸಿತ್ತು. ಅನ್ಯಾಯದ ವಿರುದ್ಧ ಪ್ರತಿಭಟಿಸುವುದಕ್ಕೆ ಆಕ್ಸ್ ಫರ್ಡ್ ನಲ್ಲಿದ್ದ ಭಾರತೀಯರೇ ನನ್ನನ್ನು ಬೆಂಬಲಿಸಲಿಲ್ಲ. ಆದರೆ ಅಲ್ಲಿನ ತಾರತಮ್ಯವನ್ನು ಎದುರಿಸುವಾಗ ಭಾರತದಲ್ಲಿ ಬೆಂಬಲವಾಗಿ ನಿಂತಿದ್ದ ಮಂದಿಯ ನೈತಿಕ ಶಕ್ತಿಯ ಕಾರಣ ನನಗೆ ವಿದೇಶದಲ್ಲೂ ಅನ್ಯಾಯದ ವಿರುದ್ಧ ಹೋರಾಡುವುದಕ್ಕೆ ಸಾಧ್ಯವಾಯಿತು. ಅದರ ಪರಿಣಾಮವಾಗಿ ಘಟನೆಯಲ್ಲಾದ ತಪ್ಪುಗಳ ಕುರಿತು ಕ್ಷಮೆಯಾಚಿಸಿ ಲಿಖಿತ ಪತ್ರವನ್ನು ಆಕ್ಸ್ ಫರ್ಡ್ ನೀಡಿತಲ್ಲದೇ ಅದರ ವಿಚಾರಣೆಯನ್ನು ನಡೆಸುವುದಕ್ಕೂ ಮುಂದಾಯಿತು ಎಂದರು.

ಜಗತ್ತಿನಲ್ಲಿ ಹಿಂದು ಎಂದು ಎನಿಸಿಕೊಂಡವರು ತುಳಿತಕ್ಕೆ ಒಳಗಾಗಿಯೇ ಇರಬೇಕು ಎಂದು ಬಯಸುವ ವರ್ಗವೊಂದು ಸದಾ ನಮ್ಮನ್ನು ಹಳಿಯುವ ಕೆಲಸದಲ್ಲಿ ನಿರತವಾಗಿದೆ. ಅವರಷ್ಟು ವ್ಯಾಪಕವಾಗಿ ನಮ್ಮ ಕಥನವನ್ನು ಹೇಳಲು ನಾವು ಆಸಕ್ತಿವಹಿಸದ ಕಾರಣ ಅನೇಕ ಕಥನಗಳನ್ನು ನಾವು ಬೇಧಿಸಲು ಸಾಧ್ಯವಾಗುತ್ತಿಲ್ಲ. ಜಗತ್ತಿನ ವಿವಿಧ ದೇಶಗಳಲ್ಲಿ ಭಾರತೀಯ ಮೂಲದವರು ಮಾಡಿದ ಸಾಧನೆಯನ್ನು ಸಂಭ್ರಮಿಸುವಾಗ ಅವರನ್ನು ಭಾರತೀಯರೆಂದು ಸಂಭ್ರಮಿಸುವ ನಾವು, ಹೊರಗಡೆ ತಾರತಮ್ಯ ಮೊದಲಾದ ತೊಂದರೆಗಳನ್ನು ಎದುರಿಸಿ ಪ್ರತಿಭಟಿಸುವಾಗ ಅವರನ್ನು ಹಿಂದು ಎಂದು ನಿರ್ಲಕ್ಷಿಸುತ್ತಿದ್ದೇವೆ. ಈ ಮನಸ್ಥಿತಿಯ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net