

ಬಾಲಾಸೋರ್: ಕೆಲದಿನಗಳ ಹಿಂದೆ ಮಳೆಗಾಲದಲ್ಲಿ ಸಂಗಾತಿಯನ್ನು ಆಕರ್ಷಿಸಲು ಕಪ್ಪೆಗಳು ಹಳದಿ ಬಣ್ಣಕ್ಕೆ ತಿರುಗುವ ಸಂಗತಿಯನ್ನು ಓದಿದ್ದಿರಿ. ಆದರೆ ಈಗ ಆಮೆಯ ಸರದಿ.
ಓಡಿಶಾದ ಬಾಲಾಸೋರ್ನ ಸುಜಾನ್ಪುರ ಗ್ರಾಮದ ನಿವಾಸಿಗಳು ಅತ್ಯಂತ ಅಪರೂಪದ ಹಳದಿ ಬಣ್ಣದ ಆಮೆಯೊಂದನ್ನು ಪತ್ತೆ ಮಾಡಿದ್ದಾರೆ. ಹಾಗೆಂದು ಮಳೆಗಾಲದಲ್ಲಿ ಸಂಗಾತಿಯನ್ನು ಆಕರ್ಷಿಸಲು ಮೈಬಣ್ಣ ಬದಲಿಸಿಕೊಳ್ಳುವ ಕಪ್ಪೆಗಳಂತೆ ಇದು ತನ್ನ ಮೈಬಣ್ಣವನ್ನು ಬದಲಿಸಿಕೊಂಡಿಲ್ಲ. ಬದಲಿಗೆ ಅದು ಇರುವುದೇ ಹಾಗೆ.
ಗ್ರಾಮಸ್ಥರು ಈ ಆಮೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಆಮೆಯು ಚರ್ಮ ಬಿಳಿಚುವಿಕೆ (Albino) ರೋಗದಿಂದ ಬಳಲುತ್ತಿರಬಹುದು. ಇದರ ಕಣ್ಣು ಕೂಡ ನಸುಗೆಂಪು ಬಣ್ಣದಿಂದ ಕೂಡಿದೆ. ಇದು ಕೂಡ ಚರ್ಮದ ಬಿಳಿಚುವಿಕೆಯ ರೋಗದ ಲಕ್ಷಣವಾಗಿದೆ ಎಂದು ವಿವರಿಸಿದ್ದಾರೆ.
ಹಳದಿ ಬಣ್ಣದ ಆಮೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ವನ್ಯಜೀವಿಗಳ ವಾರ್ಡನ್ ಭಾನುಮಿತ್ರಾ ಆಚಾರ್ಯ, ಆಮೆಯ ಚಿಪ್ಪು ಮತ್ತು ದೇಹವಿಡೀ ಹಳದಿ ಬಣದ್ದಾಗಿದೆ. ಇಂಥ ಆಮೆಯನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಒಡಿಶಾದ ಮಯೂರಭ್ಗಂಜ್ ಜಿಲ್ಲೆಯ ಡ್ಯೂಲಿ ಅಣೆಕಟ್ಟಿನಲ್ಲಿ ಅತ್ಯಂತ ಅಪರೂಪದ ಟ್ರಿಯಾನ್ಚಿಡೇ ಆಮೆಯೊಂದು ಪತ್ತೆಯಾಗಿತ್ತು. ಸಾಮಾನ್ಯವಾಗಿ ಆಮೆಗಳ ಚಿಪ್ಪು ಗಟ್ಟಿಯಾಗಿರುತ್ತದೆ. ಆದರೆ, ಈ ಆಮೆಯ ಚಿಪ್ಪು ತುಂಬಾ ಮೆದುವಾಗಿರುತ್ತದೆ. ಇಂಥ ಆಮೆಗಳು ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.