150ಕ್ಕೂ ಹೆಚ್ಚು ಕೆರೆಗಳಿಗೆ ಶೀಘ್ರ ಜೀವಕಳೆ

23.. Pyp.03
Published on

ಪಿರಿಯಾಪಟ್ಟಣ : ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದರ ಜತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಆರಂಭಗೊಂಡ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಜ.24ರಂದು ಲೋಕಾರ್ಪಣೆಗೊಳ್ಳಲಿದೆ.


ಕೊಲ್ಲಾಪುರದ ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಾಲೂಕಿನ ಈ ಮಹತ್ವಕಾಂಕ್ಷಿ ಯೋಜನೆ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಶೇ.99ರಷ್ಟು ಕಾಮಗಾರಿ ಸಂಪೂರ್ಣಗೊಂಡಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ನೆರವೇರಿದ್ದ ಈ ಕಾಮಗಾರಿ ಸಿಎಂ ಸಿದ್ದರಾಮಯ್ಯನವರಿಂದಲೇ ಉದ್ಘಾಟನೆ ಆಗುತ್ತಿರುವುದು ತಾಲೂಕಿನ ರೈತಾಪಿ ವರ್ಗಕ್ಕೆ ಸಂತಸದ ವಿಷಯ.


ಬಹುತೇಕ ಕೃಷಿ ಪ್ರಧಾನವಾಗಿರುವ ತಾಲೂಕಿನಲ್ಲಿ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿಗಳ ಭಾಗಶಃ ಪ್ರದೇಶಗಳಲ್ಲಿ ಹಾರಂಗಿ ಬಲದಂಡೆ ಯೋಜನೆ, ಕರಡಿಲಕ್ಕನಕೆರೆ ಏತ ನೀರಾವರಿ ಯೋಜನೆಗಳ ಮೂಲಕ ಕಾಲುವೆಗಳಲ್ಲಿ ನೀರನ್ನು ಹರಿಸಿ ಆ ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಲ್ಲದೇ, ಕೃಷಿ ಚಟುವಟಿಕೆಗಳಿಗೆ ನೀರನ್ನು ನೀಡಲಾಗುತ್ತಿದೆ. ಆದರೆ ಪಿರಿಯಾಪಟ್ಟಣ ಕಸಬಾ, ರಾವಂದೂರು ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಕೆರೆಗಳು ಮಳೆಯಾಶ್ರಿತ ಕೆರೆಗಳಾಗಿದ್ದು, ಉತ್ತಮವಾಗಿ ಮಳೆಯಾದಲ್ಲಿ ಮಾತ್ರ ಭರ್ತಿಯಾಗುತ್ತವೆ. ಸಮರ್ಪಕವಾಗಿ ಮಳೆಯಾಗದಿದ್ದಲ್ಲಿ ಕೆರೆ-ಕಟ್ಟೆಗಳಲ್ಲಿ ಜನವರಿ ತಿಂಗಳಿನಿಂದಲೇ ನೀರು ಖಾಲಿಯಾಗಿ ಒಣಗತೊಡಗುತ್ತವೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‌ಗಳಲ್ಲಿ ನೀರು ದೊರಕದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತದೆ. ಜತೆಗೆ ಜಾನುವಾರುಗಳಿಗೂ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ.


ತಾಲೂಕಿನಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಳಿಸಬೇಕು, ಕೆರೆಗಳು ವರ್ಷವಿಡೀ ಭರ್ತಿಯಿದ್ದಲ್ಲಿ ಅಂತರ್ಜಲ ಮಟ್ಟ ಸುಧಾರಿಸಿ ಬೋರ್‌ವೆಲ್‌ಗಳಲ್ಲಿ ಯಥೇಚ್ಛವಾಗಿ ನೀರು ಲಭಿಸಲಿದೆ ಎನ್ನುವ ಉದ್ದೇಶದಿಂದ ಶಾಸಕ ಕೆ.ವೆಂಕಟೇಶ್ ಈ ಯೋಜನೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆದು ಮುಖ್ಯಮಂತ್ರಿಗಳಿಂದಲೇ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿ ಮೊತ್ತ 245 ಕೋಟಿ ರೂ., ಪೈಪ್‌ಲೈನ್‌ಗಳ ಅಳವಡಿಕೆ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರಕ್ಕೆ 45 ಕೋಟಿ ರೂ. ಸೇರಿದಂತೆ ಒಟ್ಟಾರೆ ಅಂದಾಜು 290 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮದ ಬಳಿ ಹರಿಯುತ್ತಿರುವ ಕಾವೇರಿ ನದಿಯಿಂದ ಏತನೀರಾವರಿ ಮೂಲಕ ನೀರನ್ನು ಮೇಲೆತ್ತಿ ಅಲ್ಲಿಂದ ಸುಮಾರು 11.37 ಕಿ.ಮೀ.ವರೆಗೆ ಅಳವಡಿಸಿರುವ ರೈಸಿಂಗ್ ಮೈನ್ ಎಂಎಸ್ ಪೈಪ್‌ಲೈನ್ ಮೂಲಕ ಬ್ಯಾಡರಬಿಳಗೊಲಿ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಸಂಗ್ರಹಣಾ ತೊಟ್ಟಿಗೆ ನೀರನ್ನು ತರಲಾಗುವುದು. ಸಂಗ್ರಹಣಾ ತೊಟ್ಟಿಯಿಂದ ಎಡ ಮತ್ತು ಬಲ ಗುರುತ್ವಾಕರ್ಷಣ ವ್ಯವಸ್ಥೆಯಡಿ ಅಳವಡಿಸಲಾಗಿರುವ ಪೈಪ್‌ಲೈನ್ ಮೂಲಕ ನೀರನ್ನು ಹಾಯಿಸಲಾಗುವುದು. ನೀರು ಸಂಗ್ರಹಣಾ ತೊಟ್ಟಿಯಿಂದ ತಾಲೂಕಿನ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲು 59.3 ಕಿ.ಮೀ. ಕಾಂಕ್ರೀಟ್ ಪೈಪ್‌ಲೈನ್ ಮತ್ತು 115 ಕಿ.ಮೀ. ಎಚ್‌ಡಿಪಿಇ ಪಿವಿಸಿ ಪೈಪ್‌ಲೈನ್ ಮಾಡಲಾಗಿದ್ದು, ಬಹುತೇಕ ಕಾಮಗಾರಿ ಮುಗಿದಿದೆ.
ಅರೆಮಲೆನಾಡು ಪ್ರದೇಶವಾಗಿರುವ ತಾಲೂಕಿನಲ್ಲಿ ಮಳೆಗಾಲದಲ್ಲಿ ಬಹುತೇಕ ಕೆರೆಗಳು ಭರ್ತಿಯಾಗುತ್ತವೆ. ಆದರೆ ಬೇಸಿಗೆಯ ಬಿರು ಬಿಸಿಲಿನಿಂದಾಗಿ ಕೆರೆಗಳು ಬೇಗನೇ ಬತ್ತುವುದರಿಂದ ಅಂತರ್ಜಲ ಕುಸಿಯುತ್ತದೆ. ಜಾನುವಾರುಗಳಿಗೆ ಮೇವಿನ ಕೊರತೆ ಮತ್ತು ರೈತರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಉದ್ಘಾಟನೆಗೆ ಕಾಲ ಕೂಡಿ ಬಂದಿರುವುದು ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.


ರೈತಾಪಿ ವರ್ಗಕ್ಕೆ ವರದಾನ: 150 ಕೆರೆಗಳು ಭರ್ತಿಯಾದಲ್ಲಿ ಜಾನುವಾರುಗಳಿಗೆ ಮತ್ತು ರೈತರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಜತೆಗೆ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗುವುದರಿಂದ ಮಳೆಯಾಶ್ರಿತ ಬೆಳೆಗಳಾದ ತಂಬಾಕು, ಮೆಕ್ಕೆ ಜೋಳ, ರಾಗಿ, ಭತ್ತ ಹಾಗೂ ಕಾಫಿ, ಅಡಕೆ, ತೆಂಗು, ಬಾಳೆ, ಹಸಿ ಶುಂಠಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತಾಪಿ ವರ್ಗಕ್ಕೆ ವರದಾನವಾಗಲಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಕೇವಲ 5 ಕಿ.ಮೀ.ನಷ್ಟು ಪೈಪ್‌ಲೈನ್ ಕಾಮಗಾರಿ ಬಾಕಿ ಉಳಿದಿದ್ದು ಮಳೆಗಾಲ ಆರಂಭಗೊಳ್ಳುವಷ್ಟರಲ್ಲಿ ಶೇ.100ರಷ್ಟು ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂಬುದು ಇಲಾಖೆಯ ಅಧಿಕಾರಿಗಳಿಂದ ಬರುವ ಮಾಹಿತಿ.


85 ಕಟ್ಟೆಗಳು ಭರ್ತಿ: ಈಗ ಸಂಪೂರ್ಣಗೊಂಡಿರುವ ಕಾಮಗಾರಿಗಳ ವರದಿಯಂತೆ ಸುಮಾರು 85 ಕೆರೆಗಳನ್ನು ಭರ್ತಿ ಮಾಡಬಹುದಾದರೂ, ಬೇಸಿಗೆ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ಮಳೆ ಬಿರುಸುಗೊಳ್ಳುವ ಜುಲೈ ತಿಂಗಳಿನಲ್ಲಿ ಕಾವೇರಿ ನದಿಯಿಂದ ನೀರನ್ನು ಮೇಲೆತ್ತಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net