ಅತ್ಯಾಚಾರ ಸಂತ್ರಸ್ತೆ ವಯಸ್ಸು ಸಾಬೀತಾದರಷ್ಟೇ ಶಿಕ್ಷೆ; ಪೋಕ್ಸೋ ಪ್ರಕರಣ ಕುರಿತು ಹೈಕೋರ್ಟ್ ಆದೇಶ, ತ್ವರಿತಗತಿ ನ್ಯಾಯಾಲಯ ಆದೇಶ ರದ್ದು

high court
Published on

ಬೆಂಗಳೂರು: ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪ್ರಾಪ್ತಳೆಂಬ ವಿಚಾರವನ್ನು ಆರೋಪಿ ಅಲ್ಲಗಳೆದಾಗ ಸಂತ್ರಸ್ತೆಯ ನಿಜವಾದ ವಯಸ್ಸು ಸಾಬೀತುಪಡಿಸುವ ದೊಡ್ಡ ಜವಾಬ್ದಾರಿ ಪ್ರಾಸಿಕ್ಯೂಷನ್ ಮೇಲಿರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆ ವಯಸ್ಸು ಸಾಬೀತಾಗದ ಹೊರತಾಗಿಯೂ ಆರೋಪಿಗೆ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 5 ವರ್ಷ ಕಠಿಣ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಜಮಖಂಡಿಯ ತ್ವರಿತಗತಿ ನ್ಯಾಯಾಲಯ ನೀಡಿದ್ದ ಆದೇಶ ರದ್ದುಕೋರಿ ಮುಧೋಳದ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಪೀಠ, ಈ ಆದೇಶ ಮಾಡಿದೆ.

ನಿರ್ಧರಿಸುವುದು ಹೇಗೆ?: ಅಪ್ರಾಪ್ತ ಸಂತ್ರಸ್ತರ ವಯಸ್ಸು ನಿರ್ಧರಿಸಲು ಎಸ್​ಎಸ್​ಎಲ್​ಸಿ ಅಥವಾ ತತ್ಸಮಾನ ತರಗತಿಯ ಪ್ರಮಾಣಪತ್ರ ಪರಿಗಣಿಸಬೇಕಾಗುತ್ತದೆ. ಅದು ಲಭ್ಯವಿದ್ದರೆ ಬೇರಾವುದೇ ಸಾಕ್ಷ್ಯಾಧಾರ ಅಗತ್ಯವಿರುವುದಿಲ್ಲ. ಒಂದು ವೇಳೆ ಅದು ಅಲಭ್ಯವಾದರೆ, ಸಂತ್ರಸ್ತ ಮಗು ದಾಖಲಾದ ಮೊದಲ ಶಾಲೆಯಲ್ಲಿ ನಮೂದಿಸಲಾದ ಜನ್ಮದಿನಾಂಕವನ್ನು ಪರಿಗಣಿಸಬೇಕಾಗುತ್ತದೆ ಹಾಗೂ ಅದೇ ಅಂತಿಮವಾಗುತ್ತದೆ. ಒಂದೊಮ್ಮೆ ಅದೂ ಇಲ್ಲವಾದರೆ, ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯಿತಿ ವತಿಯಿಂದ ವಿತರಿಸಲಾದ ಜನನ ಪ್ರಮಾಣಪತ್ರ ಪರಿಗಣಿಸಬಹುದಾಗಿದೆ. ಈ ಯಾವ ದಾಖಲೆಗಳೂ ಲಭ್ಯವಿಲ್ಲದಿದ್ದಾಗ ಮಾತ್ರ ವೈದ್ಯಕೀಯ ಸಲಹೆ ಮೇರೆಗೆ ವಯಸ್ಸು ನಿರ್ಧರಿಸಬಹುದಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ವಿವರಿಸಿದೆ.

ಸಾಬೀತಾಗದ ವಯಸ್ಸು: ಸೆಕ್ಷನ್ 366ಎ ಅನ್ವಯಿಸಲು ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಹಾಗೂ ಆಕೆಯನ್ನು ಅಕ್ರಮ ದೈಹಿಕ ಸಂಪರ್ಕ ಬೆಳೆಸುವ ಉದ್ದೇಶದಿಂದ ಬಲವಂತವಾಗಿ ಅಥವಾ ವ್ಯಾಮೋಹ ತೋರಿಸಿ ಕರೆದುಕೊಂಡು ಹೋಗಿರುವುದನ್ನು ಸಾಬೀತುಪಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆ 8 ರಿಂದ 10ನೇ ತರಗತಿಗೆಂದು ಸೇರಿದ್ದ ಶಾಲಾ ದಾಖಲಾತಿ ಪ್ರಮಾಣಪತ್ರವನ್ನು ಒದಗಿಸಿದ್ದು, ಅದರಲ್ಲಿ ಆಕೆಯ ಜನ್ಮದಿನಾಂಕ 1995ರ ಜೂ.2 ಎಂದು ಹೇಳಲಾಗಿದೆಯಾದರೂ, ಯಾವ ಆಧಾರದಲ್ಲಿ ಆ ಜನ್ಮ ದಿನಾಂಕ ನಮೂದಿಸಲಾಗಿದೆ, 1ರಿಂದ 7ನೇ ತರಗತಿ ವರೆಗೆ ಯಾವ ಶಾಲೆಯಲ್ಲಿ ಓದಿದ್ದಾಳೆ ಎಂಬು ದನ್ನು ಅವರು ಸ್ಪಷ್ಟಪಡಿಸಿಲ್ಲ ಎಂದು ಕೋರ್ಟ್ ಹೇಳಿದೆ.

ವೈದ್ಯರ ವರದಿಯಲ್ಲೂ ಇಲ್ಲ: ವೈದ್ಯರ ವರದಿಯಲ್ಲಿ ಸಂತ್ರಸ್ತೆಯ ಕನ್ಯಾಪೊರೆ ಹರಿದಿದೆ, ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ಬಲವಂತವಾಗಿ ಅತ್ಯಾಚಾರವೆಸಗಿದ್ದರೆ ಸಂತ್ರಸ್ತೆಯ ದೇಹದ ಮೇಲೆ ಗಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಪಾಸಣೆ ನಡೆಸಿದ ವೈದ್ಯರೂ ಒಪ್ಪಿಕೊಂಡಿದ್ದಾರೆ. ಆರೋಪಿಯು ಸಂತ್ರಸ್ತೆ ಅಪ್ರಾಪ್ತಳೆಂಬ ವಿಚಾರವನ್ನು ನಿದಿಷ್ಟವಾಗಿ ಅಲ್ಲಗಳೆಯುತ್ತಿರುವಾಗ ಅದನ್ನು ಸಾಬೀತುಪಡಿಸುವ ದೊಡ್ಡ ಹೊಣೆ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಆದರೆ, ವಯಸ್ಸನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಕೇವಲ ಸಂತ್ರಸ್ತೆಯ ಶಾಲೆಯ ಮುಖ್ಯ ಶಿಕ್ಷಕರ ಒದಗಿಸಿರುವ ದಾಖಲಾತಿ ಪ್ರಮಾಣಪತ್ರ ಹಾಗೂ ವೈದ್ಯರ ವರದಿ ಯನ್ನು ಪರಿಗಣಿಸಿ, ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ ಎಂದು ಹೇಳಿರುವ ಹೈಕೋರ್ಟ್, ಆರೋಪಿಯ ಶಿಕ್ಷೆ ರದ್ದುಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net