

ಬೆಂಗಳೂರು: ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಎಸ್‌ಸಿ 3ನೇ ಸೆಷನ್ ನ್ಯಾಯಾಲಯ ತೀರ್ಪು ನೀಡಿದೆ. ಬನ್ನೇರುಘಟ್ಟ ರಸ್ತೆ ಪಿಳ್ಳಗಾನಹಳ್ಳಿ ನಿವಾಸಿ ವಿಶ್ವನಾಥ ಅಲಿಯಾಸ್ ವಿಶ್ವ ಶಿಕ್ಷೆಗೆ ಗುರಿಯಾದ ಅಪರಾಧಿ. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ, ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ಮತ್ತು ಅಪರಾಧಿಗೆ ವಿಧಿಸಿದ 25 ಸಾವಿರ ರೂ. ದಂಡವನ್ನು ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.
ಜಯನಗರ 4ನೇ ಹಂತದಲ್ಲಿ ಖಾಸಗಿ ಶಾಲೆಯಲ್ಲಿ 2020ರಲ್ಲಿ ಸಂತ್ರಸ್ತೆ 8ನೇ ತರಗತಿಯಲ್ಲಿ ಓದುತ್ತಿದ್ದಳು. ಆಗ ಅಜ್ಜಿ ಮನೆಗೆ ಹೋಗಿ ಬರುವಾಗ ಪರಿಚಯ ಮಾಡಿಕೊಂಡ ಅಪರಾಧಿ ವಿಶ್ವನಾಥ್, ಮದುವೆ ಆಗುವುದಾಗಿ ಪುಸಲಾಯಿಸಿ ಪಿಳ್ಳಗಾನಹಳ್ಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಅಪರಾಧಿಗೆ ಈ ಮೊದಲೇ ಮದುವೆ ಆಗಿತ್ತು.
ಇದನ್ನು ಮುಚ್ಚಿಟ್ಟು ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ. 2020ರ ಮಾರ್ಚ್ 9ರಂದು ಮನೆಗೆ ಕರೆದೊಯ್ದು ಬಾಲಕಿಯನ್ನು ಬಂಧನದಲ್ಲಿ ಇಟ್ಟುಕೊಂಡಿದ್ದ. ಬಾಲಕಿ ಬಿಡುವಂತೆ ಒತ್ತಾಯ ಮಾಡಿದಾಗ ಚಾಕುವನ್ನು ಸ್ಟೌನಲ್ಲಿ ಕಾಯಿಸಿ ಆಕೆಯ ಎಡಗೈ ಭುಜದ ಮೇಲೆ ಸುಟ್ಟು ಗಾಯ ಮಾಡಿದ್ದ. ಆನಂತರ ಆಟೋದಲ್ಲಿ ಬನಶಂಕರಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ. ಈ ಬಗ್ಗೆ ಎಫ್ಐಆರ್ ದಾಖಲು ಮಾಡಿಕೊಂಡ ಜೆ.ಪಿ.ನಗರ ಪೊಲೀಸರು, ವಿಶ್ವನಾಥ್‌ನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.