More

    ದೋಸೆಯೊಂದಿಗೆ ಸಾಂಬಾರ್ ಕೊಡಲಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕ; ತೀರ್ಪು ಕೇಳಿ ಜನರಿಗೆ ಅಚ್ಚರಿಯೋ ಅಚ್ಚರಿ…!

    ಬಿಹಾರ: ದೋಸೆಯೊಂದಿಗೆ ಸಾಂಬಾರ್ ಮತ್ತು ಚಟ್ನಿ ಬಡಿಸುವುದು ರೂಢಿ. ಆದರೆ ಬಿಹಾರದ ಬಕ್ಸಾರ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ದೋಸೆಯೊಂದಿಗೆ ಸಾಂಬಾರ್ ನೀಡುವ ಬದಲು ಸೂಪ್‌ ಕೊಟ್ಟಿದ್ದಾರೆ. ಅಂದಹಾಗೆ ಈ ಸ್ಪೆಷಲ್ ಮಸಾಲಾ ದೋಸೆಯ ಬೆಲೆ 140 ರೂ ಆಗಿದ್ದು, ರೆಸ್ಟೊರೆಂಟ್ ಈಗ 3,500 ರೂ.ಗಳನ್ನು ದಂಡವಾಗಿ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ.

    ಗ್ರಾಹಕ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಎಳೆದು ತಂದ ನಂತರ ರೆಸ್ಟೋರೆಂಟ್‌ಗೆ 3,500 ರೂ.ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ರೆಸ್ಟೋರೆಂಟ್​​ಗೆ 45 ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಕಟ್ಟದಿದ್ದಲ್ಲಿ ದಂಡದ ಮೊತ್ತದ ಮೇಲೆ ಪ್ರತಿಶತ 8% ಬಡ್ಡಿಯನ್ನು ಕಟ್ಟಬೇಕು.

    ಆಗಿದ್ದೇನು?
    ಘಟನೆಯು ಆಗಸ್ಟ್ 15, 2022 ರಂದು ನಡೆದಿದೆ. ವಕೀಲ ಮನೀಶ್ ಗುಪ್ತಾ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಮಸಾಲಾ ದೋಸೆಯನ್ನು ಸವಿಯಲು ನಿರ್ಧರಿಸಿ ಬಕ್ಸಾರ್‌ನ ನಮಕ್ ರೆಸ್ಟೋರೆಂಟ್​​ಗೆ ಹೋಗಿ 140 ರೂಪಾಯಿ ಮೌಲ್ಯದ ವಿಶೇಷ ಮಸಾಲೆ ದೋಸೆಯನ್ನು ಪ್ಯಾಕ್ ಮಾಡಿಸಿದರು. ಆದರೆ ಮನೆಗೆ ತಂದು ನೋಡಿದರೆ ದೋಸೆಯೊಂದಿಗೆ ಸಾಂಬಾರ್ ಇರಲಿಲ್ಲ. ಕೋಪಗೊಂಡ ಅವರು ಸಾಂಬಾರ್ ಇರದ ಬಗ್ಗೆ ವಿಚಾರಿಸಲು ರೆಸ್ಟೋರೆಂಟ್​​ಗೆ ಹೋದರು.

    ರೆಸ್ಟೋರೆಂಟ್ ಮಾಲೀಕ ತಪ್ಪಿತಸ್ಥ
    ರೆಸ್ಟೋರೆಂಟ್ ಮಾಲೀಕರು ಮನೀಶ್ ಗುಪ್ತಾ ಪ್ರಶ್ನೆಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. “ನೀವು ರೆಸ್ಟೋರೆಂಟ್ ಅನ್ನು 140ರೂಗೆ ಖರೀದಿಸಲು ಬಯಸುವಿರಾ?” ಎಂದೆಲ್ಲಾ ಪ್ರಶ್ನಿಸತೊಡಗಿದರು. ಆಗ ಮನೀಶ್ ರೆಸ್ಟೋರೆಂಟ್​​ಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದರು. 11 ತಿಂಗಳ ನಂತರ, ಗ್ರಾಹಕ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಮತ್ತು ಸದಸ್ಯ ವರುಣ್ ಕುಮಾರ್ ಅವರ ವಿಭಾಗೀಯ ಪೀಠವು ರೆಸ್ಟೋರೆಂಟ್ ಮಾಲೀಕ ತಪ್ಪಿತಸ್ಥ ಎಂದು ಪರಿಗಣಿಸಿ 3,500 ರೂ ದಂಡ ವಿಧಿಸಿತು.

    ಶೇಕಡ 8 ರಷ್ಟು ಬಡ್ಡಿ
    ರೆಸ್ಟೋರೆಂಟ್‌ಗೆ 3,500 ರೂಪಾಯಿ ದಂಡ ವಿಧಿಸಿದ ವಿಭಾಗೀಯ ಪೀಠವು ಅರ್ಜಿದಾರ ಮನೀಶ್ ಗುಪ್ತಾ ಅವರ “ಮಾನಸಿಕ, ದೈಹಿಕ ಮತ್ತು ಆರ್ಥಿಕ” ನೋವನ್ನು ಗಮನಿಸಿದೆ. ದಂಡವನ್ನು ಎರಡು ಭಾಗಗಳಲ್ಲಿ ವಿಧಿಸಲಾಗಿದೆ. 1,500 ರೂ. ವ್ಯಾಜ್ಯ ವೆಚ್ಚ ಮತ್ತು 2,000 ರೂ ಮೂಲ ದಂಡ. ನಿಗದಿತ ಸಮಯದಲ್ಲಿ ಪಾವತಿ ಮಾಡದಿದ್ದರೆ, ದಂಡದ ಮೊತ್ತಕ್ಕೆ ರೆಸ್ಟೋರೆಂಟ್‌ನಿಂದ ಶೇಕಡ 8 ರಷ್ಟು ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts