ಮೊಮ್ಮಗಳ ಮೇಲೆ ತಾತನಿಂದ ಅತ್ಯಾಚಾರ

Child Rape New
Published on

ಬೆಂಗಳೂರು: ಮೊಮ್ಮಗಳ ಮೇಲೆ ಆಕೆಯ ತಾತನೇ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ. ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಸಂತ್ರಸ್ತೆ ತಂದೆಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ 6 ವರ್ಷದ ಬಾಲಕಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ತಾಯಿ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ರಸ್ತೆ ಹುಳಿಮಾವು ಸಮೀಪ ತಂದೆ- ತಾಯಿ ಜತೆ ಸಂತ್ರಸ್ತೆ ನೆಲೆಸಿದ್ದಳು. ಜತೆಯಲ್ಲೇ ತಾತ ಮತ್ತು ಅಜ್ಜಿ ವಾಸವಾಗಿದ್ದರು. ಇತ್ತೀಚೆಗೆ ಪಾಲಕರು ಕೆಲಸಕ್ಕೆ ಹೋದ ಮೇಲೆ ಮನೆಯಲ್ಲಿ ಇದ್ದ ಬಾಲಕಿ ಮೇಲೆ ತಾತ ಲೈಂಗಿಕ ದೌರ್ಜನ್ಯ ಎಸಗಿದ್ದ. ಕೆಲಸದಿಂದ ಮನೆಗೆ ತಾಯಿ ಬಳಿ ಬಾಲಕಿ ಅಳಲು ತೋಡಿಕೊಂಡಿದ್ದಳು. ಆದರೆ ಈ ವಿಚಾರವನ್ನು ಬಹಿರಂಗಪಡಿಸದಂತೆ ಆರೋಪಿಗಳು ಆಮಿಷವೊಡ್ಡಿದ್ದರು.

ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ. ಚಿನ್ನದ ಒಡವೆ ಕೊಡಿಸುತ್ತೇವೆ ಎಂದು ಆಸೆ ತೋರಿಸಿದ್ದರು. ಇದಕ್ಕೊಪ್ಪದ ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೃತ್ಯವೆಸಗಿದವನ ಜತೆ ಆತನ ಪತ್ನಿಯೂ ಪರಾರಿಯಾಗಿದ್ದಾರೆ. ಇದಕ್ಕೆ ಸಹಕರಿಸಿದ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net