ಡ್ರಾಪ್ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಆಟೋ ಚಾಲಕನಿಗೆ 20 ವರ್ಷ ಜೈಲು

pc (3)
Published on

ಬೆಂಗಳೂರು: ದೇವಸ್ಥಾನಕ್ಕೆ ಬಂದು ಮನೆಯ ದಾರಿ ತಪ್ಪಿದ್ದ 13 ವರ್ಷದ ಬಾಲಕಿಯನ್ನು ಮನೆಗೆ ಬಿಡುವುದಾಗಿ ಆಟೋದಲ್ಲಿ ಹತ್ತಿಸಿಕೊಂಡ ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಬೊಮ್ಮನಹಳ್ಳಿ ನಿವಾಸಿ ನವಾಜ್ ಖಾನ್ ಅಲಿಯಾಸ್ ಕಾಲು (28) ಅಪರಾಧಿ. 20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಎ್ಟಿಎಸ್‌ಸಿ 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಮಹೇಶ್ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಡಿಎಲ್‌ಎಸ್‌ಎಯಿಂದ 2.15 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಸಂತ್ರಸ್ತೆ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ಗೊರವರ ವಾದ ಮಂಡಿಸಿದ್ದರು. ಮೈಕೋ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ಎಂ.ಎಲ್. ಗಿರೀಶ್ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಕಾನ್‌ಸ್ಟೆಬಲ್ ರಾಜಶೇಖರ್, ಸಾಕ್ಷಿದಾರರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.

8ನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತ ಬಾಲಕಿ, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮೈಕೋ ಲೇಔಟ್‌ನ ಬಿಳೇಕಹಳ್ಳಿಯ ದೊಡ್ಡಮ್ಮನ ಮನೆಗೆ ಬಂದಿದ್ದಳು. 2023ರ ಮೇ 16ರ ಬೆಳಗ್ಗೆ 11 ಗಂಟೆಗೆ ಸಮೀಪದ ಗಣಪತಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ವಿಳಾಸ ಗೊತ್ತಾಗದೆ ದಾರಿ ತಪ್ಪಿದ್ದಳು. ಬನ್ನೇರುಘಟ್ಟ ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗುತ್ತಾ ದಾರಿಹೋಕರ ಬಳಿ ವಿಳಾಸ ಕೇಳುತ್ತಿದ್ದನ್ನು ಗಮನಿಸಿದ ಅಪರಾಧಿ ನವಾಜ್ ಖಾನ್, ಹತ್ತಿರ ಬಂದು ವಿಚಾರಿಸಿದ್ದಾನೆ.

ಮನೆ ಗೊತ್ತಾಗುತ್ತಿಲ್ಲ ಎಂದಾಗ ಡ್ರಾಪ್ ಮಾಡುವುದಾಗಿ ಹೇಳಿ ಬಿಟಿಎಂ ಲೇಔಟ್ ವೆಂಕಟೇಶ್ವರ ಲೇಔಟ್‌ನಲ್ಲಿ ಐಸ್ ಕ್ರೀಂ ಕೊಡಿಸಿ ಸಮೀಪದ ಬಾಡಿಗೆ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಆನಂತರ ಬಿರಿಯಾನಿ ಪಾರ್ಸೆಲ್ ಮಾಡಿಸಿಕೊಟ್ಟು ಮನೆ ಸಮೀಪ ಬಿಟ್ಟು ಪರಾರಿಯಾಗಿದ್ದ. ನೊಂದ ಬಾಲಕಿ ಪಾಲಕರ ಬಳಿ ಅಳಲು ತೋಡಿಕೊಂಡಾಗ ದೂರು ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net