ತೆಲಂಗಾಣ ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚಾರ ಆರೋಪ

Crime Logo
Published on

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೆಲಂಗಾಣದ ಕಾಂಗ್ರೆಸ್ ನಾಯಕ ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶಿವಕುಮಾರ್ ರೆಡ್ಡಿ ಅವರು, ಸದ್ಯ ತೆಲಂಗಾಣದ ನಾರಾಯಣಪೇಟ್ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ್ದಾರೆ. ಅವರು ೨೦೧೮ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ್ ಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರ ವಿರುದ್ಧ ದೂರು ಕೊಟ್ಟಿರುವ ಸಂತ್ರಸ್ತ ಮಹಿಳೆಯು ಕಾಂಗ್ರೆಸ್‌ನ ಕಾರ್ಯಕರ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಾಹಿತರಾದ ಶಿವಕುಮಾರ್ ರೆಡ್ಡಿ ಅವರು, ಪಕ್ಷದ ಚುನಾವಣಾ ಪ್ರಚಾರದ ವಿಚಾರವಾಗಿ ಮಾತನಾಡಲು ತಮ್ಮನ್ನು ಬೆಂಗಳೂರು ಮತ್ತು ಹೈದರಾಬಾದ್‌ನ ಹೋಟೆಲ್ಗೆ ಕರೆಸಿಕೊಂಡಿದ್ದರು. ನಂತರ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ ತಮಗೆ ಕುಡಿಸಿದ್ದರು. ಶಿವಕುಮಾರ್ ರೆಡ್ಡಿ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ತಮ್ಮ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಸಂತ್ರಸ್ತ ಮಹಿಳೆಯ ದೂರಿನ ಸಂಬಂಧ ಈಗಾಗಲೇ ಶಿವಕುಮಾರ್ ರೆಡ್ಡಿ ವಿರುದ್ಧ ಹೈದರಾಬಾದ್‌ನ ಪಂಜಗುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಸ್ಥಳೀಯವಾಗಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net