

ಪಣಜಿ: ಅತ್ಯಾಚಾರದ ಆರೋಪ ಹೊಂದಿದ್ದ ಕೈದಿಯೊಬ್ಬ ಸೆಂಟ್ರಲ್ ಜೈಲ್ನಿಂದಲೇ ಪರಾರಿಯಾಗಿರುವ ಅಪರೂಪದ ಪ್ರಸಂಗ ವರದಿಯಾಗಿದೆ. ವಿದೇಶಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಇವನ ಮೇಲಿದೆ.
ತಮಿಳುನಾಡು ಮೂಲದ ರಾಮಚಂದ್ರನ್ ಚೆನ್ನಂಡಾಯೆಲ್ಲಪ್ಪ ಎಂಬ ಈ ಆರೋಪಿ ಗೋವಾದ ಕೇಂದ್ರ ಕಾರಾಗೃಹದಿಂದ ಮಂಗಳವಾರ ಪರಾರಿಯಾಗಿದ್ದಾನೆ. ಈತ 2018ರ ಡಿಸೆಂಬರ್ನಲ್ಲಿ ದಕ್ಷಿಣ ಗೋವಾ ಜಿಲ್ಲೆಯ ಕೆನಕೊನಾ ಎಂಬಲ್ಲಿ ಬ್ರಿಟಿಷ್ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. ಈತನ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಈ ಆರೋಪಿ ಜೈಲಿನಿಂದ ಪರಾರಿ ಆಗುತ್ತಿರುವುದು ಇದೇ ಮೊದಲೇನಲ್ಲ. 2019ರ ಜುಲೈನಲ್ಲೂ ಈತ ಜೈಲ್ನಿಂದ ಪರಾರಿಯಾಗಿದ್ದು, ಬಳಿಕ ತಮಿಳುನಾಡು ಪೊಲೀಸರು ಈತನನ್ನು ಮತ್ತೆ ಬಂಧಿಸಿ ಸೆರೆಮನೆಗೆ ತಳ್ಳಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)