

ಮಹಾರಾಷ್ಟ್ರ: ಬದ್ಲಾಪುರದಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನಿನ್ನೆ (ಸೆ.23) ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಎಚ್ಚೆತ್ತುಕೊಂಡ ಖಾಕಿ ಪಡೆ ಆತನ ಮೇಲೆ ಗುಂಡಿನ ದಾಳಿ ನಡೆಸಿತು. ಪೊಲೀಸರ ಗುಂಡೇಟಿಗೆ ಬಲಿಯಾದ ಅತ್ಯಾಚಾರ ಆರೋಪಿಯ ಸಾವನ್ನು ಅಲ್ಲಿನ ಜನರು ಹಬ್ಬದಂತೆ ಸಂಭ್ರಮಿಸಿದ ದೃಶ್ಯಗಳು ಇದೀಗ ಜಾಲತಾಣಗಳಲ್ಲಿ ಹರಿದಾಡಿವೆ.
ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿ ಅಕ್ಷಯ್ ಶಿಂಧೆ ನಗರದ ಪೊಲೀಸರ ಕಣ್ತಪ್ಪಿಸಿ ಓಡಿಹೋಗಲು ಯತ್ನಿಸಿದ. ಈ ವೇಳೆ ಪೊಲೀಸರ ಬಳಿಯಿದ್ದ ಪಿಸ್ತೂಲ್ ಅನ್ನೇ ಕಸಿದು, ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ. ಪೊಲೀಸರು ಮತ್ತು ಆರೋಪಿ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಗಾಯಗೊಂಡರೆ, ಅಕ್ಷಯ್ ಗುಂಡೇಟಿಗೆ ಬಲಿಯಾಗಿದ್ದಾನೆ.
ವರದಿಗಳ ಪ್ರಕಾರ, ಆರೋಪಿ ಶಿಂಧೆಯನ್ನು ನಿನ್ನೆ (ಸೆ.24) ಸಂಜೆ 5.30ರ ಸುಮಾರಿಗೆ ಜೈಲಿನಿಂದ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಪೊಲೀಸರ ಗುಂಡೇಟಿನಿಂದ ಅತ್ಯಾಚಾರ ಆರೋಪಿ ಸಾವಿಗೀಡಾಗಿದ್ದನ್ನು ಕಂಡು ಸಂಭ್ರಮಿಸಿದ ಬದ್ಲಾಪುರ ಹಾಗೂ ಥಾಣೆ ಜನರು, ನಗರದ ರಸ್ತೆಗಳು, ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ, ಸಂಭ್ರಮಿಸಿದ್ದಾರೆ. ಈ ದೃಶ್ಯಗಳು ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿವೆ,(ಏಜೆನ್ಸೀಸ್).