

ಬೆಂಗಳೂರು: ಕದ್ದ ಬೈಕ್, ಕಾರುಗಳಲ್ಲಿ ಸುತ್ತಾಡಿ ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ನ್ಯಾಮತ್ ಉಲ್ಲಾ (೨೨), ಗೋವಿಂದಪುರದ ಅಸ್ರಾನ್ ಅಹಮ್ಮದ್ (೨೫), ಸೈಯದ್ ಅಬ್ದುಲ್ ಫರ್ಜಾನ್ (೨೦), ಸೈಯದ್ ಸಫಿ (೨೪), ಸೈಪ್ ಉಲ್ಲಾ ಖಾನ್ (೨೩) ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ೧೭.೫ ಲಕ್ಷ ರೂ. ಮೌಲ್ಯದ ಕಾರು, ೧೫ ಬೈಕ್ ಹಾಗೂ ೧೧,೭೫೦ ರೂ. ನಗದು ವಶಕ್ಕೆ ಪಡೆಯಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರುಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ಅದೇ ವಾಹನಗಳಲ್ಲಿ ನಗರದಲ್ಲಿ ಸುತ್ತಾಡಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಅ.೫ ರಂದು ಅಮೃತಹಳ್ಳಿಯ ಶ್ರೀರಾಂಪುರ ನಿವಾಸಿವೊಬ್ಬರ ಕಾರು ಕಳವು ಮಾಡಿ, ಅದೇ ಕಾರನ್ನು ಬಳಸಿಕೊಂಡು ಸುಲಿಗೆ ಮಾಡಿದ್ದರು. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ೮ ಸುಲಿಗೆ, ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.