ನೆಟ್‌ವರ್ಕ್ ಇಲ್ಲದೆ 100 ಕಿ.ಮೀ.ವರೆಗೆ ವಿಸ್ತಾರ

vidyanagara transmitter installation
ವಿದ್ಯಾನಗರದ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಎಫ್‌ಎಂ ರೇಡಿಯೋ ಆರಂಭಿಸಲು ಕೆನಡಾದಿಂದ ತರಿಸಿದ್ದ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‌ಮೀಟರ್ ಅಳವಡಿಕೆ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಾ. ಎಲ್.ಮುರುಗನ್ ಅವರೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ. ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಕೆ.ಬಿ.ಅಶೋಕನಾಯ್ಕ, ಕೆ.ಟಿ.ಸಂಜೀವ್, ಡಾ. ರಘು, ಸುಬ್ರಾಯ ಭಟ್ ಇದ್ದರು.
Published on

ಶಿವಮೊಗ್ಗ: ಶಿವಮೊಗ್ಗದ ನೂತನ ಪ್ರಸಾರ ಕೇಂದ್ರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 10 ಕಿ.ವಾ. ಸಾಮರ್ಥ್ಯದ ಟ್ರಾನ್ಸ್‌ಮೀಟರನ್ನು ಕೆನಡಾದಿಂದ ತರಿಸಿ ಅಳವಡಿಸಲಾಗುತ್ತಿದೆ. 100 ಕಿ.ಮೀ. ವ್ಯಾಪ್ತಿಯವರೆಗೆ ಯಾವುದೇ ಡೇಟಾ ಕೇಬಲ್‌ಗಳ ಸಹಾಯವಿಲ್ಲದೇ ಆಲಿಸಬಹುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ವಿದ್ಯಾನಗರದ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಎಫ್‌ಎಂ ರೇಡಿಯೋ ಆರಂಭಿಸಲು ಕೆನಡಾದಿಂದ ತರಿಸಿದ್ದ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‌ಮೀಟರ್ ಅಳವಡಿಕೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಭದ್ರಾವತಿ ಕೇಂದ್ರದಲ್ಲಿ 1 ಕಿ.ವಾ. ಸಾಮರ್ಥ್ಯದ ಟ್ರಾನ್ಸ್‌ಮೀಟರನ್ನು ಅಳವಡಿಸಲಾಗಿದೆ. ಮೊಬೈಲ್ ಮೂಲಕವೂ ಎಫ್‌ಎಂ ಕಾರ್ಯಕ್ರಮ ಕೇಳಬಹುದು ಎಂದರು.

ಭದ್ರಾವತಿ ಆಕಾಶವಾಣಿ ವಜ್ರಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಎಫ್‌ಎಂ ಆರಂಭ ಆಗುತ್ತಿರುವುದು ಶುಭ ಸಂಕೇತ. ಆಕಾಶವಾಣಿ ನಾಡಿನ ಸುದ್ದಿಗಳನ್ನು ಮಾತ್ರವಲ್ಲದೇ ಮನೋರಂಜನಾ ಮಾಧ್ಯಮವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಜನರ ಸಂಪರ್ಕ ಮಾಧ್ಯಮವಾಗಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸಿ, ಪ್ರಸಾರ ಮಾಡುವ ಮೂಲಕ ಪರಿಚಿತವಾಗಿದೆ.

ಶಿವಮೊಗ್ಗಕ್ಕೆ ಎಫ್‌ಎಂ ಕೇಂದ್ರಕ್ಕೆ ಒಂದು ವಿಐಪಿ ಸ್ಟುಡಿಯೋ ಮಾಡಿಕೊಡಬೇಕು. ಗುಡ್ಡೇಕಲ್‌ನಲ್ಲಿ 120 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿಯ ಪುತ್ಥಳಿ ಸ್ಥಾಪನೆ ಮಾಡುತ್ತಿದ್ದು ಅದಕ್ಕೆ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸುವಂತೆ ಮನವಿ ಮಾಡಿದರು. ಜತೆಗೆ ಶಿವಮೊಗ್ಗದಿಂದ ತಿರುವಣ್ಣಮಲೈಗೆ ರೈಲು ಸೇವೆ ಆರಂಭಕ್ಕೂ ಸಚಿವರಿಗೆ ಬೇಡಿಕೆ ಇಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net