ರಂಗನತಿಟ್ಟು ಪಕ್ಷಿಧಾಮದಲ್ಲೂ ಚಿಟ್ಟೆಪಾರ್ಕ್

SRP_25-01(b)jpj
ಶ್ರೀರಂಗಪಟ್ಟಣ ತಾಲೂಕಿನ ವಿಶ್ವಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಸೋಮವಾರ ಅರಣ್ಯಸಚಿವ ಈಶ್ವರ ಬಿ.ಖಂಡ್ರೆ ಅವರು ಧಿಕಾರಿಗಳೊಂದಿಗೆ ಕಾವೇರಿ ನದಿಯಲ್ಲಿ ದೋಣಿ ವಿಹಾರ ನಡೆಸಿ ಪಕ್ಷಿಗಳು ಹಾಗೂ ಮೊಸಳೆಗಳ ವೀಕ್ಷಣೆ ನಡೆಸಿದರು.
Published on

ಶ್ರೀರಂಗಪಟ್ಟಣ: ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮದಲ್ಲೂ ಬನ್ನೇರುಘಟ್ಟದ ಮಾದರಿಯಲ್ಲೇ ಚಿಟ್ಟೆಪಾರ್ಕ್ ನಿರ್ಮಿಸಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವಂತೆ ವ್ಯವಸ್ಥೆ ಕಲ್ಪಿಸಿ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಸೋಮವಾರ ತಲಾ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 3 ನೂತನ ವಿಹಾರ ದೋಣಿಗಳನ್ನು ಉದ್ಘಾಟಿಸಿದ ಬಳಿಕ ಉದ್ಯಾನದಲ್ಲಿ ಆಯೋಜಿಸಿದ್ದ ಪಕ್ಷಿಧಾಮದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರಂಗನತಿಟ್ಟು ಪಕ್ಷಿಧಾಮ ರಾಮ್ಸರ್ ಸೈಟ್(ಜೌಗು ತಾಣಕ್ಕೆ)ಗೆ ಸೇರಿದ ಕರ್ನಾಟಕ ಏಕೈಕ ತಾಣ ಎಂಬುದು ಸಂತಸದ ವಿಚಾರ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸ್ವಚ್ಛ ಶೌಚಗೃಹ, ವಾಹನಗಳ ಪಾರ್ಕಿಂಗ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸುವ ಜತೆಗೆ ರಂಗನತಿಟ್ಟಿನ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಸೂಚನೆ ನೀಡಿದರು.

ಇನ್ನು ರಂಗನತಿಟ್ಟು ಪಕ್ಷಿಧಾಮದಲ್ಲಿ ಈಗಾಗಲೇ ಇರುವ ವಿಹಾರ ದೋಣಿಗಳಿಗೆ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ, ತುಂಗಾ, ಕೃಷ್ಣಾ ಎಂದು ಹೆಸರಿಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸೋಮವಾರ ಉದ್ಘಾಟಿಸಿದ ದೋಣಿಗಳಿಗೆ ಮಾಂಜ್ರಾ, ಗೋದಾವರಿ, ಕಾರಂಜಾ ನದಿಗಳ ಹೆಸರಿಡುವಂತೆ ಸಲಹೆ ನೀಡಿದರು.

ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ: ಅರಣ್ಯ ಇಲಾಖೆಯ ಚಾರಣ, ಸಫಾರಿಗಳ ತಾಣದಲ್ಲಿ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾದರಿ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವೇಶ ಟಿಕೆಟ್ ಮತ್ತು ದೋಣಿ ವಿಹಾರದ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಲು ಈಶ್ವರ ಬಿ.ಖಂಡ್ರೆ ಸೂಚಿಸಿದರು.

ಗೆಂಡೆಹೊಸಹಳ್ಳಿ ದ್ವೀಪ ಅಭಿವೃದ್ಧಿಗೆ ಪ್ರಸ್ತಾವನೆಗೆ ಸೂಚನೆ

ತಾಲೂಕಿನ ಅರಕೆರೆ ಹೋಬಳಿಯಲ್ಲಿನ ಗೆಂಡೆಹೊಸಹಳ್ಳಿ ದ್ವೀಪದಲ್ಲೂ ನೂರಾರು ಬಗೆಯ ಪಕ್ಷಿಗಳು ಬಂದು ಗೂಡುಕಟ್ಟಿ, ಸಂತಾನೋತ್ಪತ್ತಿ ಮಾಡುತ್ತಿರುವ ಹಿನ್ನೆಲೆ ಈ ದ್ವೀಪವನ್ನೂ ರಂಗನತಿಟ್ಟು ಪಕ್ಷಿಧಾಮ ರೀತಿಯಲ್ಲೇ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವಾಗಿ ರೂಪಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ರಂಗನತಿಟ್ಟು ಪಕ್ಷಿಧಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ 16ನೇ ಶತಮಾನದಲ್ಲಿ ಮೈಸೂರು ಮಹಾರಾಜರಾಜರ ಕಾಲದಲ್ಲಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂ ಪ್ರಸ್ತುತ ಶಿಥಿಲಗೊಂಡು ಸಾಕಷ್ಟು ಹಾನಿಗೊಳಗಾಗಿದೆ. ಇದನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಅವರು ದುರಸ್ತಿ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಬಂಡೀಪುರ, ನಾಗರಹೊಳೆ ಸೇರಿದಂತೆ ಎಲ್ಲ ಅರಣ್ಯಗಳಲ್ಲೂ ಮುಂಜಾಗ್ರತಾ ಕ್ರಮವಾಗಿ ಕಾಳ್ಗಿಚ್ಚು ನಿಯಂತ್ರಣ ಸೇರಿದಂತೆ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಕಡಿವಾಣ ಹಾಕಿ ಯಾವುದೇ ಪ್ರಾಣಹಾನಿ ಸಂಭವಿಸದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ದೋಣಿವಿಹಾರ ನಡೆಸಿದ ಅರಣ್ಯ ಸಚಿವರು

ಇದಕ್ಕೂ ಮೊದಲು ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರು ಸಸಿ ನೆಟ್ಟು ನೀರುಣಿಸಿದ ಬಳಿಕ ದೋಣಿ ವಿಹಾರ ನಡೆಸಿ ಕಾವೇರಿ ನದಿಯ ಮಧ್ಯೆಯ ಬಂಡೆಗಳ ಮೇಲೆ ಮಲಗಿದ್ದ ಬೃಹತ್ ಗಾತ್ರದ ಮಾರ್ಷಲ್ ತಳಿಯ ಮೊಸಳೆಗಳು, ನದಿಯಲ್ಲಿ ಕಂಡುಬಂದ ಮಹಿಶಿರ್ ಮೀನುಗಳು ಹಾಗೂ ದೇಶ-ವಿದೇಶಗಳಿಂದ ಸಂತಾನೋತ್ಪತ್ತಿಗಾಗಿ ಆಗಮಿಸಿರುವ ಪೆಲಿಕಾನ್, ರಿವರ್‌ಟರ್ನ್, ಕಾರ್ಮೊರೆಂಟ್, ಪೈಡ್ ಕಿಂಗ್‌ಫಿಷರ್ ಮೊದಲಾದ ಪಕ್ಷಿಗಳನ್ನು ವೀಕ್ಷಿಸಿ ಫೋಟೋ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ಮುಕ್ತ ಮೈಸೂರು ಕಡ್ಡಾಯವಾಗಿ ಪಾಲನೆಯಾಗಲಿ

ಇದೇ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೋಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಈಶ್ವರ್ ಬಿ.ಖಂಡ್ರೆ, ಮೈಸೂರಿನಲ್ಲಿ ಘೋಷಣೆಯಾಗಿರುವ ಪ್ಲಾಸ್ಟಿಕ್‌ಮುಕ್ತ ವಲಯವನ್ನು ಕಡ್ಡಾಯವಾಗಿ ಪಾಲನೆಯಾಗಬೇಕು. ಈಗಾಗಲೇ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುವ ಸ್ಥಳಗಳ ಮೇಲೆ ಇಲಾಖೆಯ ಅಧಿಕಾರಿಗಳ ತನಿಖಾ ತಂಡ ನಿರಂತರವಾಗಿ ದಿಢೀರ್ ಭೇಟಿ ನೀಡಿ ಪರಿಶೀಲನೆಯೊಂದಿಗೆ ಕ್ರಮ ಕೈಗೊಳ್ಳಬೇಕು. ಜತೆಗೆ ಇದೇ ಮಾದರಿ ಮಂಡ್ಯ ಜಿಲ್ಲೆಯಲ್ಲೂ ಜಾರಿಯಾಗುವಂತೆ ಆಯಾ ವ್ಯಾಪ್ತಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿ, ಒಳಚರಂಡಿ ಸೇರಿದಂತೆ ಕಾರ್ಖಾನೆಗಳ ಮಲಿನ ನೀರು ಎಲ್ಲೆಲ್ಲಿ ನದಿಗಳು, ಕೆರೆಗಳಿಗೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂಬುದರ ಮಾಹಿತಿ ಪಡೆದರು.

ಪರಿಸರ ಮಂಡಳಿ ವ್ಯಾಪ್ತಿಗೆ 10 ಎಕರೆ ಒಳಗಿನ ಬಡಾವಣೆಗಳು ಬರುವುದಿಲ್ಲ. ಇವುಗಳ ನಿರ್ಮಾಣದಲ್ಲಿ ಆಗಿರುವ ಲೋಪ ಸೇರಿದಂತೆ ಕಾನೂನಿನ ನಿಯಮ ಪಾಲಿಸದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ವಿರುದ್ಧ ನೋಟಿಸ್ ಜಾರಿಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಹುಲಿ ಯೋಜನೆ ಸಿಎಫ್‌ಒ ರಮೇಶ್ ಕುಮಾರ್, ಮೈಸೂರು ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಬೀರಾದರ್, ಆರ್ ಎಫ್‌ಒ ನದೀಮ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್, ಪರಿಸರ ಅಧಿಕಾರಿಗಳಾದ ಸುನೀಲ್, ಕುಮಾರ್, ಮಂಡ್ಯ ವಲಯದ ಪರಿಸರ ಅಧಿಕಾರಿ ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net