ಸದ್ಯ ನೀರಿನ ಸಮಸ್ಯೆ ಇಲ್ಲ, ಅವಶ್ಯ ಬಿದ್ದರೆ ಡ್ಯಾಂನಿಂದ ನೀರು ಹರಿಸಲಾಗುವುದು; ಶಾಸಕ ಪ್ರಕಾಶ ಕೋಳಿವಾಡ

22-RNR-03
Published on

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಸದ್ಯ ಸಮರ್ಪಕವಾಗಿ ನೀರು ಹರಿಯುತ್ತಿದೆ. ಆದ್ದರಿಂದ ಇನ್ನೂ 15-20 ದಿನಗಳ ಕಾಲ ನೀರಿನ ಸಮಸ್ಯೆ ಎದುರಾಗಲ್ಲ. ಮುಂದಿನ ದಿನದಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ಕೂಡಲೇ ತುಂಗಭದ್ರಾ ಡ್ಯಾಂನಿಂದ ನೀರು ಹರಿಸಲು ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲೆಯ ಐದು ಶಾಸಕರು ಸೇರಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿಯ ನಗರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಕುಡಿಯುವ ನೀರಿನ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಕ್ಕೆ ನಿತ್ಯವೂ 25ರಿಂದ 27 ಎಂಎಲ್‌ಡಿ ಕುಡಿಯುವ ನೀರು ಬೇಕು. ಸದ್ಯ 24 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ನಗರದಲ್ಲಿರುವ 285 ಬೋರ್‌ವೆಲ್‌ಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ 160 ಬೋರ್‌ವೆಲ್‌ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. 120 ಬೋರ್‌ಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನೂಳಿದ ಬೋರ್‌ಗಳು ಬಂದ್ ಆಗಿದ್ದು, ಅವುಗಳು ಮರು ಆರಂಭಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ರೀತಿ ನಗರದಲ್ಲಿ ಮುಂದೆಯೂ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮ ವಹಿಸಲಾಗಿದೆ ಎಂದರು.
ಕೆಯುಐಡಿಎಫ್‌ಸಿ ಕಾರ್ಯನಿರ್ವಾಕ ಇಂಜಿನಿಯರ್ ರವಿಕುಮಾರ ಹಾಗೂ ನಗರಸಭೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net