

ರಾಣೆಬೆನ್ನೂರ: ಸರ್ಕಾರಿ ವಸತಿ ಶಾಲೆ ಮಕ್ಕಳನ್ನು ಕೇವಲ ಪಾಸು ಮಾಡಿ ಕಳುಹಿಸಿದರೆ ಸಾಲದು. ಅವರು ಜೆಇಇ, ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸುವಂತೆ ಸಿದ್ಧಪಡಿಸಬೇಕು. ಅದಕ್ಕಾಗಿ ಇಂಗ್ಲಿಷ್, ವಿಜ್ಞಾನ ಹಾಗೂ ಗಣಿತ ವಿಷಯದ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರತಿ ವಾರದಲ್ಲಿ ಎರಡ್ಮೂರು ದಿನ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸೂಚಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಎಸ್.ಬಿ. ಮುಳ್ಳಳ್ಳಿ, ಬಿಇಒ ಹಾಗೂ ಸಮಾಜ ಕಲ್ಯಾಣ, ಹಿಂದುಗಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿರುವ 10 ಬೆಸ್ಟ್ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ವಸತಿ ಶಾಲೆ ಮಕ್ಕಳಿಗೆ ವಿಶೇಷ ಪಾಠ ಮಾಡಲು ಸೂಚಿಸಬೇಕು. ಬಿಇಒ ನೇತೃತ್ವದಲ್ಲಿ ಅದಕ್ಕಾಗಿ ತಂಡ ರಚಿಸಬೇಕು. ಮಕ್ಕಳಿಗೆ ಊಟ, ವಸತಿ ಜತೆಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಸರ್ಕಾರದ ಉದ್ದೇಶ ಈಡೇರಲಿದೆ. ಆದ್ದರಿಂದ ಕೂಡಲೇ ಈ ಕಾರ್ಯ ಜಾರಿಗೊಳಿಸಬೇಕು ಎಂದರು. ವಸತಿ ಹಾಗೂ ಇತರ ಶಾಲೆಗಳಲ್ಲಿ ಗ್ರಂಥಾಲಯ ತೆರೆದಿಟ್ಟು ಮಕ್ಕಳು ಅದನ್ನು ಬಳಸಲು ಉತ್ತೇಜಿಸಬೇಕು ಎಂದರು.
ಶೇ. 70ರಷ್ಟು ಮಳೆ ಕೊರತೆ…
ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಶೇ. 70ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಶೇ. 20ರಷ್ಟು ಬಿತ್ತನೆ ಮಾತ್ರವಾಗಿದೆ. ಜುಲೈ 15ರ ಬಳಿಕ ಮಳೆ ಬರುವ ಕುರಿತು ಹವಾಮಾನ ಇಲಾಖೆ ಸೂಚನೆಯಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಎಸ್.ಬಿ. ಮುಳ್ಳಳ್ಳಿ, ಮುಂದೆ ಮಳೆ ಬಂದ ಮೇಲೆ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಕುರಿತು ಈಗಾಗಲೇ ಸಮಾಲೋಚನೆ ಮಾಡಿ ರೈತರಿಗೆ ಮಾರ್ಗದರ್ಶನ ನೀಡಬೇಕು. ಕೃಷಿ ಇಲಾಖೆಯಿಂದ ನರೇಗಾದಡಿ ಕೇವಲ 9 ಸಾವಿರ ಮಾನವ ದಿನ ಆಗಿವೆ. 54 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾಗೂ 39 ಸಾವಿರ ರೈತರಿರುವ ಈ ಭಾಗದಲ್ಲಿ ಮಾನವ ದಿನಗಳು ಬಹಳ ಕಡಿಮೆಯಾಗಿದೆ. ಕೂಡಲೇ ಹೆಚ್ಚುವರಿ ಕಾಮಗಾರಿ ತೆಗೆದುಕೊಂಡು ನರೇಗಾದಡಿ ರೈತರಿಗೆ ಕೆಲಸ ಕೊಡಬೇಕು ಎಂದು ಸೂಚಿಸಿದರು.
50 ಸಾವಿರ ರೂ.ಗೂ ಅಧಿಕ ಸಂಬಳ ತೆಗೆದುಕೊಳ್ಳುವ ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಮಕ್ಕಳನ್ನು ಮಾತ್ರ 8 ಸಾವಿರ ರೂ. ಸಂಬಳ ತೆಗೆದುಕೊಳ್ಳುವ ಖಾಸಗಿ ಶಿಕ್ಷಕರ ಬಳಿ ಓದಲು ಕಳುಹಿಸುತ್ತೀರಿ. ಏಕೆಂದರೆ ನೀವು ಗುಣಮಟ್ಟದ ಶಿಕ್ಷಣ ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ. ಹೀಗಾಗಿ ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಕ್ಕಳಿಗೆ ಮಾತ್ರವಲ್ಲ ನಿಮಗೂ ಮುಂದೆ ಒಳ್ಳೆಯದಾಗುತ್ತದೆ. ಇದನ್ನು ಶಿಕ್ಷಕರಿಗೆ ತಿಳಿಸಿ ಎಂದು ಎಸ್.ಬಿ. ಮುಳ್ಳಳ್ಳಿ, ಬಿಇಒಗೆ ಹೇಳಿದರು.
ಅಡಕೆ ಬೆಳೆದವರಿಗೆ ದೊಡ್ಡ ಹೊಡೆತ ಬೀಳುತ್ತೆ…
ರಾಣೆಬೆನ್ನೂರ ಭೂಮಿ ಅಡಕೆ ಬೆಳೆಯಲು ಯೋಗ್ಯವಿಲ್ಲ. ಇಲ್ಲಿ ಅಡಕೆ ಮೊದಲಿಗೆ ಮಾತ್ರ ಬೆಳೆ ಬರುತ್ತೆ. ಆದರೆ, ಕ್ರಮೇಣ ಇಳುವರಿ ಕುಂಠಿತವಾಗಿ ರೈತರಿಗೆ ದೊಡ್ಡ ಹೋಡೆತ ಬೀಳುವಂತೆ ಮಾಡುತ್ತದೆ. ಆದ್ದರಿಂದ ರೈತರಿಗೆ ಅಡಕೆ ಬದಲು ಬಾಳೆ, ಪಪ್ಪಾಯಿ ಸೇರಿ ಇತರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಸ್.ಬಿ. ಮುಳ್ಳಳ್ಳಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.