ಸಂವಿಧಾನದಡಿ ಎಲ್ಲ ಕಾನೂನು ರಚಿಸಲಾಗುವುದು; ಪುಟ್ಟಪ್ಪ ಮರಿಯಮ್ಮನವರ

14-RNR-03
Published on

ರಾಣೆಬೆನ್ನೂರ: ನಮ್ಮ ದೇಶದ ಸಂವಿಧಾನ ಎಲ್ಲ ಕಾನೂನುಗಳಿಗೂ ತಾಯಿಯಿದ್ದಂತೆ. ಸಂವಿಧಾನದಡಿ ಎಲ್ಲ ಕಾನೂನುಗಳನ್ನು ರಚಿಸಲಾಗುತ್ತದೆ ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.
ನಗರದ ತಾಪಂ ಸಭಾಭವನದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೋಷಿತ ವರ್ಗಗಳ ಜನತೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವವರೆಗೂ ಸಮಾಜದಲ್ಲಿ ಎಲ್ಲರಿಗೂ ಸರಿಸಮನಾಗಲು ಸಾಧ್ಯವಿಲ್ಲ ಎಂದರು.
ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಅಂಬೇಡ್ಕರ್ ವೈಚಾರಿಕ ಚಿಂತನೆಗಳು ಇಂದಿಗೂ ಜೀವಂತವಾಗಿದ್ದು ಅವರು ಹಾಕಿಕೊಟ್ಟ ಮಾರ್ಗದರ್ಶನದಿಂದಾಗಿ ಸಮಾಜದಲ್ಲಿ ಹಲವಾರು ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ. ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಸಮಾಜದಲ್ಲಿನ ಶೋಷಿತರ ಏಳಿಗೆಗಾಗಿ ತಮ್ಮ ಜೀವನದುದ್ದಕ್ಕೂ ಕಾರ್ಯನಿರ್ವಹಿಸಿದರು ಎಂದರು.
ತಾಪಂ ಇಒ ಸುಮಲತಾ ಎಸ್.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಿರೀಶ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅಧಿಕಾರಿ ಲಿಂಗರಾಜ ಸುತ್ತಕೋಟಿ, ರವೀಂದ್ರ ಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಚಂದ್ರಣ್ಣ ಬೇಡರ, ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನವರ, ಗಣೇಶ ಗೋಣಿಬಸಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net