

ರಾಣೆಬೆನ್ನೂರ: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶನೇಶ್ಚರ ಮಂದಿರದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಮನುಕುಲ ಸದ್ಭಾವನಾ ಧರ್ಮಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸುಂದರವಾಗಿ ಅಲಂಕಾರ ಮಾಡಿದ ಸುಳ್ಳಿಗಿಂತ ಹರಿದ ಬಟ್ಟೆಯ ಸತ್ಯವೇ ಹೆಚ್ಚು ಶಕ್ತಿಶಾಲಿ. ಕೈಗೆತ್ತಿಕೊಂಡ ಕೆಲಸವನ್ನು ರ್ಪೂಣ ಮನಸ್ಸಿನಿಂದ ನೆರವೇರಿಸುವುದು ಬಹಳಷ್ಟು ಮುಖ್ಯ. ಬದುಕೆಂಬುದು ಕಷ್ಟ ಸುಖ ನೋವು ನಲಿವುಗಳ ಸಂಮಿಶ್ರಣ. ನಮ್ಮ ಜೀವನದ ದೋಣಿಗೆ ನಾವೇ ನಾಯಕರು.
ಮನುಷ್ಯ ಬದುಕಿರುವಾಗಲೇ ಸಾಯುವ ಹಾಗೆ ಮಾಡುವ ಎರಡು ಬಲವಾದ ಕಾರಣಗಳಿವೆ. ಒಂದು ಅವಮಾನವಾದರೆ ಇನ್ನೊಂದು ಅನುಮಾನ. ಸಂಪತ್ತು ಹೆಚ್ಚಿದಂತೆ ಸೌಜನ್ಯ ಗುಣ ಬೆಳೆಯಬೇಕು. ಸಜ್ಜನ ಸತ್ಪುರುಷರ ಸಂದಿಂದ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸರಿಗೆ ಬೋಧ ಮಾಡುವಾಗ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.
ಸಮಾರಂಭ ಉದ್ಘಾಟಿಸಿದ ಸಂಸದ ಜಗದೀಶ ಶೆಟ್ಟರ ಮಾತನಾಡಿ, ಇಂದಿನ ವಿಜ್ಞಾನ ತಂತ್ರಜ್ಞಾನ ಪ್ರಪಂಚದಲ್ಲಿ ಮನುಷ್ಯ ಶಾಂತಿ ನೆಮ್ಮದಿಯಿಂದ ಬದುಕುವುದು ಕಷ್ಟವಾಗುತ್ತಿದೆ. ಜನರು ಹಣದ ಬೆನ್ನು ಹತ್ತಿ ಸಂಸತಿ ಮರೆಯುತ್ತಿದ್ದಾರೆ. ಆದರ್ಶಗಳನ್ನು ಮರೆತರೆ ಬದುಕಿಗೆ ಭವಿಷ್ಯವಿಲ್ಲ. ಇಂಥ ಸಮಾರಂಭಗಳು ಜನ ಸಮುದಾಯದಲ್ಲಿ ಶಾಂತಿ ಸಂತೃಪ್ತಿ ನೆಮ್ಮದಿ ಉಂಟು ಮಾಡುತ್ತವೆ ಎಂದರು.
ಮಂದಿರದ ವತಿಯಿಂದ ಪ್ರತಿ ವರ್ಷ ನೀಡುವ ಮನುಕುಲ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ದಾವಣಗೆರೆ ಉದ್ಯಮಿ ಪಿ. ಶಿವಕುಮಾರ ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಅವರಿಗೆ ರಂಭಾಪುರಿ ಶ್ರೀ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಈಶ್ವರನಿಗೆ ಐದು ಮುಖಗಳಿವೆ ಎನ್ನುವುದು ಸತ್ಯವಾಗಿದೆ. ಮೊದಲನೇಯ ಮುಖದಿಂದ ಹುಟ್ಟಿದ್ದು ರಂಭಾಪುರಿ ಸನ್ನಿದಿಯಾಗಿದೆ. ಮಹಿಳೆಯರು ಗಂಗೆಯನ್ನು ಪೂಜಿಸಬೇಕು. ದುಷ್ಟರಿಂದ ದೂರವಿದ್ದು, ಧಾಮಿರ್ಕ ಮನೋಭಾವನೆಯಿಂದ ಸಂಸಾರಿಕ ಜೀವನ ನಡೆಸಿ, ಹೊಟ್ಟೆ ಪಾಡಿಗಾಗಿ ಮಕ್ಕಳಿಗೆ ಯಾವುದೇ ಭಾಷೆ ಕಲಿಸಿ ಆದರೆ ಕನ್ನಡ ಕಲಿಸಲು ಮರೆಯಬೇಡಿ ಎಂದರು.
ಹಿರೇಮಠದ ಶಿವಯೋಗಿ ಶಿವಾಚಾರ್ಯರು ಸ್ವಾಮೀಜಿ, ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯರು, ನಾಗವಂದದ ಶಿವಾನಂದ ಸ್ವಾಮೀಜಿ, ನಿಚ್ಚವ್ವನಹಳ್ಳಿಯ ಶಿವಯೋಗಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಮಾರಂಭದ ನಂತರ ಶನೇಶ್ಚರ ಹಿರೇಮಠದಿಂದ ಕಾರ್ತೀಕ ದೀಪೋತ್ಸವ ಸಂಭ್ರಮದಿಂದ ಜರುಗಿತು.
ಪ್ರಮುಖರಾದ ರವೀಂದ್ರಗೌಡ ಪಾಟೀಲ, ಚಂದ್ರಣ್ಣ ಬೇಡರ, ಬಸವರಾಜ ಮೈಲಾರ, ಶಹರ ಠಾಣೆಯ ಪಿಎಸ್ಐ ಗಡ್ಡೆಪ್ಪ ಗುಂಜಟಗಿ, ಪುರೋಹಿತರು, ವೈದಿಕರು ಮತ್ತಿತರರು ಉಪಸ್ಥಿತರಿದ್ದರು.