

ರಾಣೆಬೆನ್ನೂರ: ನಗರಕ್ಕೆ ನೀರು ಪೂರೈಸುವ ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಬಳಿ ನಿರ್ಮಿಸಿದ ಜಾಕ್‌ವೆಲ್ ಸ್ಥಳಕ್ಕೆ ಶಾಸಕ ಪ್ರಕಾಶ ಕೋಳಿವಾಡ ಗುರುವಾರ ಭೇಟಿ ನೀಡಿ ನೀರಿನ ಹರಿವು ಕುರಿತು ಪರಿಶೀಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆರಾಯನ ಅವಕೃಪೆಯಿಂದ ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಆದ್ದರಿಂದ ನಾವು ಈಗಾಗಲೇ ಹಾವೇರಿ ಜಿಲ್ಲಾದ್ಯಂತ ಮೋಡ ಬಿತ್ತನೆ ಮಾಡಲು ಜಿಲ್ಲಾಡಳಿತಕ್ಕೆ ಪರವಾನಗಿ ನೀಡುವಂತೆ ಕೋರಿದ್ದೇವೆ. ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ ಬಳಿಕ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಜುಲೈ ಮೊದಲ ವಾರದಲ್ಲಿ ಮೋಡ ಬಿತ್ತನೆ ಮಾಡುತ್ತೇವೆ. ಅವಶ್ಯಬಿದ್ದರೆ ಮುಂದಿನ ದಿನದಲ್ಲಿ ಶಿವಮೊಗ್ಗ, ಉತ್ತರ ಕನ್ನಡ ಸೇರಿ ಅಕ್ಕಪಕ್ಕದ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಲಾಗುವುದು ಎಂದರು.
ವರ್ಷ ವಾಡಿಕೆ ಮಳೆಯ ಪ್ರಕಾಶ ಶೇ. 20ರಷ್ಟು ಮಳೆ ಬಿದ್ದರೆ ಅದು ಸರಿಯಾದ ಮಳೆಯಾಗಲಿದೆ. ಇದಕ್ಕಿಂತ ಕೊಂಚ ಕಡಿಮೆಯಾದರೂ ಅದು ಅನಾವೃಷ್ಟಿಗೆ ಕಾರಣವಾಗಲಿದೆ. ಅಲ್ಲದೆ ಹೆಚ್ಚಿಗೆ ಆದರೆ ಅದು ಅತಿವೃಷ್ಟಿ ಆಗಲಿದೆ. ಆದರೆ, ಇದೆಲ್ಲವೂ ದೇವರ ಇಚ್ಛೆಯಂತೆ ನಡೆಯುವ ಪ್ರಕ್ರಿಯೆ. ಸದ್ಯದ ಪರಿಸ್ಥಿತಿ ನೋಡಿದರೆ ಮಳೆ ಕುಂಠಿತವಾಗುವ ಸಾಧ್ಯತೆ ಅಧಿಕವಾಗಿದೆ ಎಂದರು.
ಸದ್ಯ ರಾಣೆಬೆನ್ನೂರ ನಗರಕ್ಕೆ ಕುಡಿಯುವ ನೀರು ಒದಗಿಸಲು ಯಾವುದೇ ತೊಂದರೆ ಇಲ್ಲ. ಆದರೆ, ಜನತೆ ನೀರಿನ ಬಗ್ಗೆ ಆಲಸೆ ತೋರದೆ ಈಗ ಮಾತ್ರವಲ್ಲದೆ ಎಂದಿಗೂ ನೀರನ್ನು ಮಿತವಾಗಿ ಬಳಸಬೇಕು. ಅಲ್ಲದೆ ನೀರಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಈ ಬಗ್ಗೆ ನಗರದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ತುಂಗಭದ್ರಾ ನದಿಗೆ ನೀರು ಹರಿಸುವ ಕುರಿತು ಈಗಾಗಲೇ ಜಿಲ್ಲೆಯ ಐದು ಶಾಸಕರು ಸೇರಿ ಸಭೆ ಮಾಡಿದ್ದೇವೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೆ ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರ ಮೂಲಕ ತುಂಗಭದ್ರಾ ಡ್ಯಾಂನವರಿಗೆ ಸೂಚಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.