ಮಜಡಾದವರಿಗೆ ಮರಳು ಕೊಡದಿದ್ದರೆ ಕುಟುಂಬ ಸಮೇತ ಧರಣಿ ಎಚ್ಚರಿಕೆ

30-RNR-05
Published on

ರಾಣೆಬೆನ್ನೂರ: ತಾಲೂಕಿನ ಹೀಲದಹಳ್ಳಿ ಬಳಿ ತುಂಗಭದ್ರಾ ನದಿಯಿಂದ ಮರಳು ತೆಗೆಯಲು ಗುತ್ತಿಗೆ ಪಡೆದಿರುವ ಹಟ್ಟಿ ಚಿನ್ನದ ಗಣಿ ಗುತ್ತಿಗೆದಾರರು ಮಜಡಾ ವಾಹನಗಳಿಗೆ ಮರಳು ವಿತರಣೆ ಮಾಡದೆ ಕೇವಲ ಲಾರಿ ಹಾಗೂ ಟಿಪ್ಪರ್‌ನವರಿಗೆ ಮಾತ್ರ ವಿತರಣೆ ಮಾಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಜಡಾ ವಾಹನಗಳ ಮಾಲೀಕರ ಹಾಗೂ ಚಾಲಕರ ಸಂಘದ ಸದಸ್ಯ ಚನ್ನಬಸಪ್ಪ ಬಾರ್ಕಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಜಡಾ ವಾಹನಗಳು 6 ಟನ್ ಮರಳನ್ನು ಹಿಡಿಯುತ್ತವೆ. ಆದರೆ, ಗುತ್ತಿಗೆದಾರರು ಕನಿಷ್ಠ 8 ಟನ್ ಮರಳು ತುಂಬುವ ವಾಹನಗಳಿಗೆ ಮಾತ್ರ ಮರಳಿನ ಪರ್ಮಿಟ್ ಕೊಡುತ್ತೇವೆ ಎಂದು ಹೇಳಿ ಮರಳು ಕೊಡುವುದನ್ನು ನಿಲ್ಲಿಸಿದ್ದಾರೆ.
ಸರ್ಕಾರ ಹಾಗೂ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ವಾಹನಕ್ಕೆ ಇಂತಿಷ್ಟೇ ಮರಳು ಕೊಡಬೇಕು ಎಂದು ಯಾವುದೇ ಆದೇಶವಿಲ್ಲ. 2 ಟನ್ ಬೇಕಾದರೂ ಮರಳು ಕೊಡಬಹುದು ಎಂದು ಹೇಳಿದ್ದಾರೆ. ಆದರೆ, ಗುತ್ತಿಗೆದಾರರು ಇಲ್ಲಸಲ್ಲದ ನೆಪ ಹೇಳಿ ಮರಳು ಕೊಡುವುದಿಲ್ಲ ನಿಲ್ಲಿಸಿದ್ದಾರೆ.
ಇದರಿಂದ ಮಜಡಾ ವಾಹನ ನಂಬಿಕೊಂಡು ಜೀವನ ಮಾಡುತ್ತಿರುವ ನಾವುಗಳು ಬೀದಿಗೆ ಬರುವ ದುಸ್ಥಿತಿ ಎದುರಾಗಿದೆ. ಆದ್ದರಿಂದ ಜು. 3ರೊಳಗೆ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಂಡು ಮಜಡಾ ವಾಹನದವರಿಗೆ ಮರಳು ವಿತರಣೆ ಮಾಡಬೇಕು. ಇಲ್ಲವಾದರೆ ಕುಟುಂಬ ಸಮೇತ ಹೋಗಿ ಮರಳು ವಿತರಣೆ ಕೇಂದ್ರದ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ನಾಗಪ್ಪ ಓಲೇಕಾರ, ಕರಬಸಪ್ಪ ಹೂಗಾರ, ಶಿವಣ್ಣ ಹರನಗಿರಿ, ಮಾಲತೇಶ ತಳವಾರ, ಮಹೇಶ ಪೂಜಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net