ವಕ್ಫ ಕಬಳಿಕೆಯಿಂದ ಭೂಮಿ ವಾಪಸ್​ ನೀಡಿ; ರೈತರ ಪ್ರತಿಭಟನೆ

4-RNR-01
Published on

ರಾಣೆಬೆನ್ನೂರ: ತಾಲೂಕಿನಲ್ಲಿ ವಕ್ಫ ಬೋರ್ಡ್​ನಿಂದ ರೈತರ ಭೂಮಿ ಕಬಳಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ರೈತರಿಗೆ ವಾಪಸ್​ ಭೂಮಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೈಕ್​ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಿಂದ ಬೈಕ್​ ರ್ಯಾಲಿ ಆರಂಭಿಸಿದ ರೈತರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧ ತಲುಪಿದರು. ನಂತರ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ವಕ್ಫ ಬೋರ್ಡ್​ನಿಂದ ಕಬಳಿಸಿರುವ ರೈತರ ಭೂಮಿ ವಾಪಸ್​ ನೀಡಬೇಕು ಎಂದು ಆಗ್ರಹಿಸಿದರು.

ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರೈತರ ಪಹಣಿ ಪತ್ರಿಕೆಯಲ್ಲಿ ನಮೂದಾಗಿರುವ ವಕ್ಫ ಬೋರ್ಡ್​ ಹೆಸರನ್ನು ತೆಗೆದು ಹಾಕಲು ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದರಿಂದ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.

ಸಿಎಂ ಸಿದ್ದರಾಮಯ್ಯನವರು ಮೌಖಿಕ ಎನ್ನುವ ಬದಲು ಕೂಡಲೇ ಲಿಖಿತವಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಕಚೇರಿಗಳಿಗೆ ಲಿಖಿತವಾಗಿ ಆದೇಶ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾವು ಯಾವ ಜಿಲ್ಲೆಗೆ ಬರುತ್ತೀರಿ ಅಲ್ಲಿಯ ರೈತರು ಮುತ್ತಿಗೆ ಹಾಕಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಎಂ ಸಿದ್ದರಾಮಯ್ಯ ಕೂಡಲೇ ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಬೇಕು. ಒಂದು ವೇಳೆ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಜಿಲ್ಲಾದ್ಯಂತ ಮತ್ತು ರಾಜ್ಯಾದ್ಯಂತ ರೈತಪರ ಸಂಘಟನೆಗಳು ಮತ್ತು ನೊಂದ ರೈತರು, ವಿವಿಧ ಸಂಘಟನೆಗಳು, ಸಾರ್ವಜನಿಕರು ಹೋರಾಟದ ಮಾಡಬೇಕಾಗುತ್ತದೆ. ಆದ್ದರಿಂದ ಸಿಎಂ ಹಾಗೂ ರಾಜ್ಯಪಾಲರು ಇದಕ್ಕೆ ಸೂಕ್ತ ಆದೇಶ ಮಾಡಿ ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ರೈತರಾದ ಬೀರಪ್ಪ ಮಳಗಿ, ದಿಳ್ಳೆಪ್ಪ ಕಾಟಿ, ಪ್ರಭುಸ್ವಾಮಿ ಕರ್ಜಗಿಮಠ, ಬಸಪ್ಪ ಕೊಪ್ಪದ, ಮಂಜಪ್ಪ ಸಾಂಬೋಜಿ, ಶಿವಪ್ಪ ಜಿಂಗಾಡಿ, ಪ್ರಶಾಂತ ಹಿತ್ತಲಮನಿ, ಉಜ್ಜೇಪ್ಪ ಗೌಡಕ್ಕಳವರ, ಬೀರಪ್ಪ ಡಂಬಳ, ಕುಬೇರಪ್ಪ ಮೊಟಗಿ, ಗಣೇಶ ಸಾಲಮನಿ, ಮಲ್ಲಪ್ಪ ಮಳಗಿ, ಕುಬೇರಪ್ಪ ದುಗ್ಗಪ್ಪ, ವಿಷ್ಣು ಜಿಂಗಾಡಿ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net