

ರಾಣೆಬೆನ್ನೂರ: ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಜತೆಗೆ ಈ ಬಾರಿಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಸೇರಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ಮಳೆ ಬದಲು ಈ ಬಾರಿ ಬಿಸಿಲು ಮುಂದುವರಿದಿದೆ. ಇದರಿಂದಾಗಿ ರೈತರು ಬಿತ್ತನೆ ಮಾಡುವುದನ್ನೆ ಕೈ ಬಿಟ್ಟಿದ್ದಾರೆ. ಆದ್ದರಿಂದ ರೈತರು ಆರ್ಥಿಕವಾಗಿ ಬಹಳಷ್ಟು ಸಂಕಷ್ಟ ಎದುರಿಸಬೇಕಾಗಿದೆ.
ರಾಜ್ಯ ಸರ್ಕಾರ ಕೂಡಲೇ ಇದನ್ನು ಪರಿಗಣಿಸಿ ರಾಣೆಬೆನ್ನೂರನ್ನು ಬಡಪೀಡಿತ ತಾಲೂಕು ಎಂದು ಘೋಷಿಸಬೇಕು. ರೈತರ ಸಾಲ ಮನ್ನಾ ಸಂಪೂರ್ಣ ಮಾಡಬೇಕು. ಬರಗಾಲದ ಹೊಡೆತಕ್ಕೆ ನಲುಗಿರುವ ಜನರಿಗೆ ಆಶ್ರಯ ನೀಡಬೇಕು. ಬೆಳೆ ವಿಮೆ ತಾರತಮ್ಯ ಸರಿಪಡಿಸಬೇಕು. ಕೆರೆಗಳನ್ನು ತುಂಬಿಸುವಂತಹ ವ್ಯವಸ್ಥೆ ಜಾರಿಯಾಗಬೇಕು. ಮುಂದಿನ ದಿನದಲ್ಲಿ ಬೀಜ-ಗೊಬ್ಬರವನ್ನು ಸಬ್ಸಿಡಿ ರೂಪದಲ್ಲಿ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ಬರಪೀಡತ ಪ್ರದೇಶವೆಂದು ಘೋಷಿಸದಿದ್ದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಿರಸ್ತೇದಾರ ವೀಣಾ ಕಲ್ಲಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ವಿಶ್ವನಾಥ ಹೊಳೆಬಾಗಿಲು, ಚಂದ್ರಶೇಖರ ತಿಮ್ಮೆನಹಳ್ಳಿ, ಚನ್ನಪ್ಪ ಅಡವೇರ, ಈರಣ್ಣ ಮಾಕನೂರ, ಸುರೇಶ ಪಾಳೇದ, ಬಸವರಾಜ ಕರೆಕಟ್ಟಿ, ಈರನಗೌಡ ಮೂಡಬಾಗಿಲ, ಮಳ್ಳಪ್ಪ ದುರ್ಗದ, ಬಿ.ಸಿ. ಯೋಗಿಮಠ, ಈರನಗೌಡ ಗುರುಲಿಂಗಪ್ಪನಗೌಡ, ನಿಂಗಪ್ಪ ಚಳಗೇರಿ, ನಿಂಗಪ್ಪ ಮೇಡ್ಲೇರಿ, ಮಂಜು ಬ್ಯಾಡಗಿ, ಬಸನಗೌಡ ಗೌಡ್ರ, ಹನುಮಂತಪ್ಪ ಮೂಲಿಮನಿ ಮತ್ತಿತರರು ಪಾಲ್ಗೊಂಡಿದ್ದರು.