ವಿದ್ಯುತ್ ದರ ಏರಿಕೆ ಖಂಡಿಸಿ ವರ್ತಕರಿಂದ ಪ್ರತಿಭಟನೆ

22-RNR-01
Published on

ರಾಣೆಬೆನ್ನೂರ: ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಗುರುವಾರ ನಗರದಲ್ಲಿ ಭಾಗಶಃ ಬೆಂಬಲ ವ್ಯಕ್ತವಾಯಿತು.
ನಗರದ ಎಪಿಎಂಸಿ ಮಾರುಕಟ್ಟೆ, ನೆಹರು ಮಾರುಕಟ್ಟೆ ಪ್ರದೇಶಗಳಲ್ಲಿನ ವರ್ತಕರು ತಮ್ಮ ಅಂಗಡಿ, ಮಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಂ.ಜಿ. ರಸ್ತೆಯಲ್ಲಿ ಕೆಲವರು ಪ್ರತಿಭಟನಾ ಮೆರವಣಿಗೆ ಸಾಗುತ್ತಿರುವಾಗ ಅಂಗಡಿಗಳನ್ನು ಮುಚ್ಚಿ ಅದು ಮುಂದೆ ಸಾಗಿದ ನಂತರ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದರು.
ಬಂದ್ ಪ್ರಯುಕ್ತ ಬೆಳಗ್ಗೆ 11.30ರ ಸುಮಾರು ನಗರದ ಎಪಿಎಂಸಿ ಗಣಪತಿ ದೇವಸ್ಥಾನದ ಬಳಿಯಿಂದ ಎಪಿಎಂಸಿ ಹಾಗೂ ನೆಹರು ಮಾರುಕಟ್ಟೆ ವರ್ತಕರ ಸಂಘಗಳ ನೇತೃತ್ವದಲ್ಲಿ ವರ್ತಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರುಬಗೇರಿ ಕ್ರಾಸ್, ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ತಾಲೂಕು ಆಡಳಿತ ಸೌಧಕ್ಕೆ ತೆರಳಿದ ವರ್ತಕರು ತಹಸೀಲ್ದಾರ ಕೆ. ಗುರುಬಸವರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅಲ್ಲಿಂದ ಹೆಸ್ಕಾಂ ಕಚೇರಿಗೆ ತೆರಳಿ ವಿಭಾಗಾಧಿಕಾರಿಗಳಿಗೆ ಹಾಗೂ ನಗರಸಭೆಗೆ ಆಗಮಿಸಿ ಶಾಸಕ ಪ್ರಕಾಶ ಕೋಳಿವಾಡ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಮಾತನಾಡಿ, ಹೊಸ ಶುಲ್ಕ ಪದ್ಧತಿಯಲ್ಲಿ ಎಫ್‌ಎಸಿ ಲೆಕ್ಕಾಚಾರದ ವಿಧಾನವನ್ನು ಬದಲಾಯಿಸಿರುವುದರಿಂದ ಅದು ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ಕೈಗಾರಿಕೆಗಳು ಮತ್ತು ವರ್ತಕರಿಗೆ ಮಾತ್ರವಲ್ಲದೆ ಜನಸಾಮಾನ್ಯರ ಮೇಲೆಯೂ ಅಧಿಕ ಭಾರ ಹೇರಿದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕು ಮತ್ತು ಎಫ್‌ಎಸಿಯ ಹಳೆಯ ವ್ಯವಸ್ಥೆ ಮರು ಸ್ಥಾಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರತರನಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net