

ರಾಣೆಬೆನ್ನೂರ: ಮುನ್ಸಿಪಲ್ ಹೈಸ್ಕೂಲ್ ಸೇರಿ ನಗರದ ಸರ್ಕಾರಿ ಅಭಿವೃದ್ಧಿ, ನಗರದ ಪ್ರಮುಖ ಸ್ಥಳಗಳಲ್ಲಿ ಶೌಚಗೃಹ ನಿರ್ಮಾಣ ಹಾಗೂ ತ್ಯಾಜ್ಯ ವಿಲೇವಾರಿ ನಿರ್ವಹಣೆ ಸೇರಿ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಇಲ್ಲಿಯ ನಗರಸಭೆ ಸಭಾಭವನದಲ್ಲಿ ಏರ್ಪಡಿಸಿದ್ದ 2025&-26ನೇ ಸಾಲಿನ ಆಯವ್ಯಯ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಅಭಿವೃದ್ಧಿ, ರಸ್ತೆಗಳ ಒತ್ತುವರಿ ತೆರವು, ತ್ಯಾಜ್ಯ ವಿಲೇವಾರಿ, ಶೌಚಗೃಹ ನಿರ್ಮಾಣ, ಶಾಲಾ&ಕಾಲೇಜ್ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆ, ಉದ್ಯಾನಗಳ ಅಭಿವೃದ್ಧಿ ಸೇರಿ ಸ್ಥಳಿಯ ನಾಗರಿಕರು ವಿವಿಧ ಬೇಡಿಕೆ ಈಡೇರಿಸಲು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅದರಂತೆ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಿ ಮಾಡಲಾಗುವುದು.
ಜಿಲ್ಲೆಯಲ್ಲಿ ರಾಣೆಬೆನ್ನೂರ ನಗರಸಭೆ ಚನ್ನಾಗಿದೆ. ನಾಗರಿಕರು ಪ್ರಜ್ಞಾವಂತರಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂಪನ್ಮೂಲಕ್ಕಿಂತ ಸ್ಥಳಿಯ ಸಂಪನ್ಮೂಲ ನೋಡಿಕೊಂಡು ಬಜೆಟ್ ಸಿದ್ಧತೆ ಮಾಡಿಕೊಳ್ಳುವ ಕಾರ್ಯ ಮಾಡೋಣ. ಬಹಳಷ್ಟು ದಿನಗಳಿಂದ ಆಗದಿರುವ ಕೆಲಸಗಳನ್ನು ತೆಗೆದುಕೊಂಡು ಕಾಮಗಾರಿ ಮಾಡಿಸಬೇಕಿದೆ ಎಂದರು.
ರಕ್ಷವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಮಹಿಳೆಯರಿಗೆ ಶೌಚಗೃಹ, ಬಸ್ ನಿಲ್ದಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರದ ಕೋಟೆ ಓಣಿ ಬಳಿಯಿರುವ ಬ್ರಾಹ್ಮಣ ಸಮಾಜದ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲ. ಇದಕ್ಕೆ ದಾರಿ ವ್ಯವಸ್ಥೆ ಮಾಡಬೇಕು. ತಾಪಂ ಎದುರಿಗೆ ಇರುವ ಶೌಚಗೃಹಕ್ಕೆ ಕಾಲಿಡಲು ಆಗಲ್ಲ. ಅದನ್ನು ಬಂದ್ ಮಾಡಿ ತಾಪಂ ಆವರಣದಲ್ಲಿ ಸುಸಜ್ಜಿತ ಶೌಚಗೃಹ ನಿಮಿರ್ಸಿಕೊಡಬೇಕು ಎಂದು ಆಗ್ರಹಿಸಿದರು.
ಸ್ಥಳಿಯ ನಿವಾಸಿ ಸಂಜೀವರೆಡ್ಡಿ ಮಾತನಾಡಿ, ನಗರದಲ್ಲಿ ಅಂತರಜಲಮಟ್ಟ ಏರಿಕೆ ಮಾಡುವ ದೃಷ್ಟಿಯಿಂದ ಮಾದರಹೊಂಡ ಅಭಿವೃದ್ಧಿ ಪಡಿಸಬೇಕು. ಅಂಬೇಡ್ಕರ್ ಸಮುದಾಯ ಭವನ ಸೇರಿ ಸರ್ಕಾರದ ಕಟ್ಟಡಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಪಡಿಸಬೇಕು. ಬಡವರು ಬಳಸಿಕೊಳ್ಳಲು ನೀಡಬೇಕು ಎಂದರು.
ಮುನ್ಸಿಪಲ್ ಹೈಸ್ಕೂಲ್ ಹಸ್ತಾಂತರಕ್ಕೆ ಕ್ರಮ...
ಡಾ. ಎಸ್.ಎಲ್. ಪವಾರ ಮಾತನಾಡಿ, ಮುನ್ಸಿಪಲ್ ಹೈಸ್ಕೂಲ್ ಅಭಿವೃದ್ಧಿಗಾಗಿ ಇಟ್ಟಿರುವ 5ಲಕ್ಷ ರೂ. ಹಣ ಏನಾಯಿತು ಗೊತ್ತಿಲ್ಲ. 8 ಜನ ಶಿಕ್ಷಕರಿದ್ದ ಶಾಲೆಯಲ್ಲಿ ಈಗ 6 ಜನ ಇದ್ದಾರೆ. ಇದರಿಂದ ಮಕ್ಕಳ ಕಲೆಗೆ ಹಿನ್ನಡೆಯಾಗಿದೆ. ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಶಾಲೆಯನ್ನು ಮುನ್ಸಿಪಲ್ ಬದಲು ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡೋಣ. ಇದರಿಂದ ಶಾಲೆ ಅಭಿವೃದ್ಧಿ ಅನುಕೂಲ ಆಗಲಿದೆ ಎಂದು ಸಲಹೆ ನೀಡಿದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ವರ್ತಕರ ಸಂದ ಪ್ರಕಾಶ ಜಂಬಗಿ ಮಾತನಾಡಿ, ಎಪಿಎಂಸಿನಲ್ಲಿ 24*7 ಕುಡಿಯುವ ನೀರಿಲ್ಲ. ವಿದ್ಯುತ್ ದೀಪಗಳನ್ನು ಎಪಿಎಂಸಿ ನಿರ್ವಹಣೆ ಮಾಡುತ್ತಿದೆ. ಇದನ್ನು ಬದಲಾಯಿಸಿ ನಗರಸಭೆಗೆ ಕೊಡಬೇಕು. ವರ್ತಕರು ಆನ್ಲೈನ್ನಲ್ಲಿ ತೆರಿಗೆ ತುಂಬಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಡಿಎಸ್ಎಸ್ ತಾಲೂಕು ಅಧ್ಯಕ್ಷ ಮೈಲಪ್ಪ ದಾಸಪ್ಪನವರ ಮಾತನಾಡಿ, ನಗರದ ಎಲ್ಲ ವೃತ್ತಗಳನ್ನು ಅಭಿವೃದ್ಧಿ ಪಡಿಸಬೇಕು. ಮಾಸೂರು ಮುಂಡರಗಿ ತೆರಳುವ ರಸ್ತೆ ಮಾರ್ಗದಲ್ಲಿ ಬಸ್ ನಿಲ್ದಾಣ ನಿಮಿರ್ಸಬೇಕು ಎಂದರು.
ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ಎಇಇ ಎಸ್.ಬಿ. ಮರಿಗೌಡ್ರ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತಿತರರು ಸಭೆಯಲ್ಲಿದ್ದರು.