2023ರಲ್ಲಿ 900 ಕೋಟಿ ರೂ. ಗಳಿಸಿದ ಬಾಲಿವುಡ್​ನ ಮೂರನೇ ಚಿತ್ರ ಇದೇ!

ವಿಜಯವಾಣಿ - 2024-01-09T135549.756
Published on

ಮುಂಬೈ: ಬಾಲಿವುಡ್​ ಅಂಗಳದಲ್ಲಿ​ ಕಿಂಗ್ ಖಾನ್ ಅಭಿನಯದ 'ಜವಾನ್' ಮತ್ತು 'ಪಠಾಣ್' ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದ ಮೊತ್ತವನ್ನು ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್​ ನಟನ ಚಿತ್ರ ತಲುಪುವಲ್ಲಿ ಯಶಸ್ವಿಯಾಗಿದ್ದು, ಶಾರುಖ್​ ಅವರ ಎರಡು ಚಿತ್ರಗಳ ಬಳಿಕ ಜಾಗತಿಕವಾಗಿ 900 ಕೋಟಿ ರೂ. ತಲುಪಿದ ಮೂರನೇ ಚಿತ್ರ ಇದಾಗಿದೆ. ಹಾಗಾದ್ರೆ, ಯಾವ ನಟನ ಸಿನಿಮಾವಿದು? ಎಂಬುದರ ವಿವರ ಹೀಗಿದೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಅನಿಮಲ್'​ ಕಳೆದ ವರ್ಷ ಸಿಕ್ಕಾಪಟ್ಟೆ ಗದ್ದಲದ ಮಧ್ಯೆಯೇ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಂಡಿತು. ಬಿಡುಗಡೆಯಾದ ಮೊದಲ ದಿನವೇ ಭಾರೀ ವಿವಾದಕ್ಕೆ ತುತ್ತಾದ ಚಿತ್ರವು, ಕಲೆಕ್ಷನ್​ ಸಾಲಿನಲ್ಲಿ ಮಾತ್ರ ಕುಸಿಯಲಿಲ್ಲ ಎಂಬುದು ಆಶ್ಚರ್ಯ! ಇದೀಗ ಈ ಚಿತ್ರ ವಿಶ್ವದಾದ್ಯಂತ 900 ಕೋಟಿ ರೂ. ಗಡಿ ದಾಟಿದ ಮೂರನೇ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿದೆ.

ಸಿನಿಪ್ರೇಕ್ಷಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ 'ಅನಿಮಲ್' ಚಿತ್ರವು, ಅಶ್ಲೀಲ ಸೀನ್​ಗಳನ್ನು ಒಳಗೊಂಡಿದೆ. ಇಂತಹ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದರು. ಸರಣಿ ಟೀಕೆಗಳ ಮಧ್ಯೆಯೂ ಇದೀಗ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿದೆ.

ಚಿತ್ರಮಂದಿರಗಳಿಗೆ ಹೆಚ್ಚಿನ ಜನರನ್ನು ಕರೆತರುವ ಪ್ರಯತ್ನದಲ್ಲಿ ತೊಡಗಿರುವ ಚಿತ್ರತಂಡ ಸದ್ಯ ಹೊಸ ಪ್ಲ್ಯಾನ್​ವೊಂದನ್ನು ಜಾರಿಗೊಳಿಸಿದೆ. ಕೇವಲ 100ರೂ.ಗೆ ಟಿಕೆಟ್​ ಖರೀದಿಸಿ, ಸಿನಿಮಾ ನೋಡಿ ಎಂಬ ಹೊಸ ಆಫರ್ ಅನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರತಂಡ​ ಘೋಷಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net