

ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಮ್ಯಾ ( ramya ) ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ರಮ್ಯಾ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ರಮ್ಯಾ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವಿನ ವಾಗ್ವಾದ ಮುಂದುವರಿದಿತ್ತು. ಈ ವೇಳೆ ಕೆಲವರು ರಮ್ಯಾ ಪರವಾಗಿ ಮಾತನಾಡಿದ್ದರು. ಈಗ ರಮ್ಯಾ ಅವರು ಈ ಕುರಿತಾಗಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೀಗ ರಮ್ಯಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ, ದ್ವೇಷ ಮತ್ತು ಹತಾಶೆಯಿಂದ ತುಂಬಿರುವ ಜಗತ್ತಿನಲ್ಲಿ, ಪ್ರೀತಿ ಮತ್ತು ಕರುಣೆಯೇ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತದೆ. ಆದ್ದರಿಂದ ನನಗೆ ಸ್ವಲ್ಪ ಪ್ರೀತಿಯನ್ನು ತೋರಿಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಧನ್ಯವಾದಗಳು! ಎಂದು ಬರೆದುಕೊಂಡಿದ್ದಾರೆ.
ನಟಿ ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರು. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ರಮ್ಯಾ ಅವರು ಮುಂದಾಗಿದ್ದು, ತಮ್ಮ ವಕೀಲರ ಜೊತೆ ಚರ್ಚಿಸಿ ರಮ್ಯಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ತಮಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಮಾತನಾಡಿದ ರಮ್ಯಾ, ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಶೇರ್ ಮಾಡಿದ್ದೆ. ಅದಕ್ಕೆ ಪ್ರತಿಯಾಗಿ ತುಂಬಾ ಕೆಟ್ಟದಾಗಿ ಮೆಸೇಜ್ ಹಾಕಿ, ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು, ನಿಮ್ಮನ್ನು ಅತ್ಯಾಚಾರ ಮಾಡ್ತೀವಿ ಎಂದೆಲ್ಲಾ ಸಂದೇಶ ಕಳುಹಿಸಿದ್ದಾರೆ. ಸುಮಾರು 43 ಫೇಕ್ ಖಾತೆಗಳ ವಿರುದ್ಧ ದೂರು ಕೊಟ್ಟಿದ್ದೇನೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆತಂಕ ಹೊರಹಾಕಿದ್ದಾರೆ. ಈ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.