

ಬೆಂಗಳೂರು: ರಾಜ್ಯದಲ್ಲಿ ಡಕಾಯಿತರು, ಗೂಂಡಾಗಳ ಅಟ್ಟಹಾಸ ಮೇರೆ ಮೀರಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪ್ರತಿ ತಿಂಗಳು ಒಂದಿಲ್ಲೊಂದು ಅಪರಾಧ ಕೃತ್ಯಗಳು ಸಂಭವಿಸುತ್ತಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ ದಂಧೆಗೆ ಪೊಲೀಸ್ ಇಲಾಖೆ ದುರ್ಬಲವಾಗಿದೆ. ಕಾನೂನು- ಸುವ್ಯವಸ್ಥೆ ದೃಷ್ಟಿಯಿಂದ ಕರ್ನಾಟಕ ತಬ್ಬಲಿಯಾಗಿದೆ ಎಂದು ವಾಗ್ದಾಳಿ ಮಾಡಿದರು.
ಕರ್ನಾಟಕ ಪೊಲೀಸ್ ವ್ಯವಸ್ಥೆ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿತ್ತು. ಜತೆಗೆ ಕರ್ನಾಟಕ ಹೂಡಿಕೆದಾರರ ಸ್ವರ್ಗವಾಗಿತ್ತು. ಈಗ ಲೂಟಿಕೋರರು, ಭ್ರಷ್ಟಾಚಾರಿಗಳ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದು ಆರ್.ಅಶೋಕ್ ವ್ಯಥೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಮಾನ-ಮರ್ಯಾದೆ ಇದ್ದರೆ ಸಿಎಂ ಕುರ್ಚಿಗೆ ಕಿತ್ತಾಟ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ಬಿಟ್ಟು ರಾಜ್ಯದ ಆಡಳಿತದತ್ತ ಗಮನಹರಿಸಲಿ. ಸಿಎಂ ಸಿದ್ದರಾಮಯ್ಯ ತಮ್ಮ ಅಸಹಾಯಕ ಪರಿಸ್ಥಿತಿಯಿಂದ ಹೊರ ಬಂದು ಗೃಹ ಇಲಾಖೆ ಪರಾಮರ್ಶಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ, ಲಂಚಗುಳಿತನ, ವರ್ಗಾವಣೆ ಮಾಫಿಯಾಗೆ ರಾಜ್ಯ ತತ್ತರಿಸಿದೆ. ಆರ್ಥಿಕ ದುಃಸ್ಥಿತಿಯಿಂದ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರದಿದ್ದರೆ ಉದ್ಯಮಿಗಳು ಕಾಲ್ತೆಗೆಯುತ್ತಾರೆ. ಬಂಡವಾಳ ಹೂಡಿಕೆದಾರರು ಹಿಂದೇಟು ಹಾಕಲಿದ್ದು, ಸಿಎಂ ಸಿದ್ದರಾಮಯ್ಯ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಆರ್.ಅಶೋಕ್ ಎಚ್ಚರಿಸಿದರು.
ಬಿಜೆಪಿ ಸರ್ಕಾರ ಸಾಲ ಮಾಡಿಟ್ಟು ಹೋಗಿದೆ. ಅನುದಾನ ಅನುಮೋದನೆಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ್ದರಿಂದ 32 ಸಾವಿರ ಕೋಟಿ ರೂ.ಗಳಷ್ಟು ಬಿಲ್ ಪಾವತಿ ಬಾಕಿ ಉಳಿಯಲು ಕಾರಣವೆಂದು ಸಚಿವರು ಹೇಳುವುದಾದರೆ ಸಾಲ, ಬಾಕಿ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುದೀರ್ಘವಾದ ಆಡಳಿತ ನಡೆಸಿದೆ. ಈ ಅವಧಿಯಲ್ಲಿ ಎಷ್ಟು ಸಾಲ ಮಾಡಿದೆ, ಮುಂಬರುವ ಸರ್ಕಾರಗಳಿಗೆ ಉಳಿಸಿ ಹೋದ ಬಾಕಿ ಬಿಲ್ ಎಷ್ಟು ?, ಹಾಲಿ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ. ಬಿಜೆಪಿ ಆಡಳಿತಾವಧಿಯ ದಾಖಲೆಗಳನ್ನು ಜನರ ಮುಂದಿಡಲಿ ಎಂದು ಸೆಡ್ಡು ಹೊಡೆದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉಳಿತಾಯ ಬಜೆಟ್ ಮಂಡಿಸಿತ್ತು. 25 ಸಾವಿರ ಕೋಟಿ ರೂ ಸಾಲ ಎತ್ತುವಳಿಗೆ ಅವಕಾಶವಿದ್ದರೂ ಅದಕ್ಕೆ ಕೈಹಾಕಲಿಲ್ಲ. ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಸಿತ್ತು. ಆದರೆ ಸಿದ್ದರಾಮಯ್ಯ ಎರಡನೇ ಅಧಿಕಾರದ ಅವಧಿಯಲ್ಲಿ ಕೊರತೆ ಬಜೆಟ್ ಮಂಡಿಸಿದ್ದು, ಸಾಲ ಎತ್ತುವಳಿ ಪ್ರಮಾಣ ಹೆಚ್ಚಿಸುವ ಜತೆಗೆ ಪೆಟ್ರೋಲ್, ಡೀಸೆಲ್ ಸೇರಿ ಅನೇಕ ತೆರಿಗೆಗಳ ದರ ಏರಿಸಿದೆ. ಬಸ್ ಪ್ರಯಾಣ ದರ ಬಳಿಕ ಮೆಟ್ರೋ ರೈಲು ದರ ಹೆಚ್ಚಳದ ಬರೆ ಹಾಕಲು ಮುಂದಾಗಿದೆ ಎಂದು ಟೀಕಿಸಿದರು.
ವಿಧಾನಾಸಭೆ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಪ್ರತಿ ಶಾಸಕರಿಗೆ ತಲಾ 10 ಕೋಟಿ ರೂ ಬಿಡುಗಡೆಯಾಗಿದೆ. ಬಿಜೆಪಿಯವರಿಗೆ ಇಷ್ಟವಿಲ್ಲದಿದ್ದರೆ ವಾಪಸ್ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ನ ಅಪ್ಪನ ಮನೆಯಿಂದ ಕೊಟ್ಟಿದ್ದರೆ ವಾಪಸ್ ಮಾಡುತ್ತಿದ್ದೆವು. ರಾಜ್ಯದ ಜನರ ತೆರಿಗೆ ಹಣವಿದು. ಬಿಜೆಪಿ ಆಡಳಿತಾವಧಿಯಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಲಾಗಿತ್ತು ಎಂಬುದನ್ನು ಒಮ್ಮೆ ದಾಖಲೆಗಳನ್ನು ನೋಡಿ ತಿಳಿದುಕೊಳ್ಳಲಿ ಎಂದು ಆರ್.ಅಶೋಕ್ ತಿರುಗೇಟು ನೀಡಿದರು.