ರಾಮನಗರ ಜಿಲ್ಲೆ ಈಗ ಬೆಂಗಳೂರು ದಕ್ಷಿಣ; ಮೆಟ್ರೋ 3ನೇ ಯೋಜನೆಗೆ ಸಚಿವ ಸಂಪುಟ ಅನುಮತಿ: ಡಿಕೆಶಿ

ವಿಜಯವಾಣಿ - 2025-05-22T193052.201
Published on

ಬೆಂಗಳೂರು: “ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಜಿಲ್ಲೆಯು ಬೆಂಗಳೂರು ದಕ್ಷಿಣ ಎಂದು ಕರೆಯಲ್ಪಡುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದು (ಮೇ.22) ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ, “ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರಿಯಲಿದೆ. ಕೇವಲ ಜಿಲ್ಲೆಯ ಹೆಸರನ್ನು ಮಾತ್ರ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿಂದೆ ಇದು ಬೆಂಗಳೂರು ಜಿಲ್ಲೆಯಾಗಿತ್ತು. ಆಡಳಿತಾತ್ಮಕ ದೃಷ್ಟಿಯಿಂದ ಈ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ಮರುನಾಮಕರಣ ಮಾಡುತ್ತಿರುವ ವಿಚಾರವನ್ನು ತಿಳಿಸಲು ಸಂತೋಷವಾಗುತ್ತಿದೆ” ಎಂದರು.

ಬಿಡಿಎ ನಿವೇಶನದಾರರ ತೆರಿಗೆ ಬಡ್ಡಿ ವಿನಾಯಿತಿಗೆ ಒಟಿಎಸ್

“ಬೆಂಗಳೂರಿನಲ್ಲಿ ಅನೇಕ ಸಂಘ ಸಂಸ್ಥೆಗಳು, ದೇವಾಲಯಗಳು ಬಿಡಿಎ ವ್ಯಾಪ್ತಿಯಲ್ಲಿ ನಿವೇಶನ ತೆಗೆದುಕೊಂಡಿದ್ದು, ಅವರಿಗೆ ಒನ್ ಟೈಮ್ ಇನ್ಟ್ರೆಸ್ಟ್ ಬೆನಿಫಿಟ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. 125 ದಿನಗಳ ಒಳಗಾಗಿ ಅವರು ಬಾಕಿಯಿರುವ ತೆರಿಗೆ ಪಾವತಿಸಿದರೆ ಬಡ್ಡಿ ವಿನಾಯಿತಿ ನೀಡಲಾಗುವುದು” ಎಂದು ತಿಳಿಸಿದರು.

ಮೆಟ್ರೋ ಮೂರನೇ ಹಂತಕ್ಕೆ ಅನುಮತಿ

“ಇನ್ನು ಟನಲ್ ವಿಚಾರವಾಗಿ ಟೆಂಡರ್ ಕರೆಯುವ ಬಗ್ಗೆ ಚರ್ಚೆ ಮಾಡಲಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಸಿಎಂ ಜತೆ ತಾಂತ್ರಿಕ ಅಂಶ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ಟೆಂಡರ್ ಜಾಗತಿಕ ಟೆಂಡರ್ ಆಗಿರಲಿದೆ. ಮೆಟ್ರೋ ವಿಚಾರವಾಗಿ ಮೂರನೇ ಹಂತದ ಮೆಟ್ರೋ ಯೋಜನೆಗೆ ಅಂದಾಜು ವೆಚ್ಚ 40,424 ಕೋಟಿ ರೂ.ಗೆ ಅನುಮತಿ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುತ್ತಿದ್ದೇವೆ” ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net