

ಬೆಂಗಳೂರು: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮೋತ್ಸವ ದಿನದಂದು ದೇಶದ ಮಸೀದಿ, ದರ್ಗಾಗಗಳಲ್ಲಿ ದೀಪಗಳು ಬೆಳಗಲಿವೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ಧಿಖಿ ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಸಂಭ್ರಮ, ಉತ್ಸವದಲ್ಲಿ ದೇಶದ 140 ಕೋಟಿ ಜನರು ಪಾಲ್ಗೊಳ್ಳಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯವಾಗಿದೆ.
ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯು ಪ್ರತಿಯೊಬ್ಬ ಭಾರತೀಯನಿಗೆ ಸಂತಸದ ಮಹೋತ್ಸವ. ಈ ಹಿನ್ನೆಲೆಯಲ್ಲಿ ರಾಮೋತ್ಸವ ಪೂರ್ವಭಾವಿಯಾಗಿ ನಡೆಸಲು ಉದ್ದೇಶಿತ ಚಟುವಟಿಕೆಗಳು ಮಸೀದಿ, ದರ್ಗಾಗಳಲ್ಲಿ ನಡೆಯಲಿವೆ.
ದೇವಸ್ಥಾನಗಳಲ್ಲಿ ಜ.14ರಂದು ಸ್ವಚ್ಛತಾ ಕಾರ್ಯ, ಜ.22ರ ಬೆಳಗ್ಗೆ ವಿಶೇಷ ಪೂಜೆ, ಸಂಜೆ ಐದು ದೀಪಗಳನ್ನು ಬೆಳಗಿಸಲಾಗುತ್ತದೆ. ಅದೇ ರೀತಿ ಮಸೀದಿ, ದರ್ಗಾಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಸೂಫಿ, ಸಂತರೊಂದಿಗೆ ಸಂವಾದ, ವಿಶೇಷ ಪ್ರಾರ್ಥನೆ ಹಾಗೂ 22ರ ಸಂಜೆ ಐದು ದೀಪಗಳನ್ನು ಬೆಳಗಿಸಲಿದ್ದಾರೆ.
ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಮೋರ್ಚಾದ ಎಲ್ಲ ಕಾರ್ಯಕರ್ತರು ಜಾಗೃತಿ ಮೂಡಿಸಲಿದ್ದಾರೆ ಎಂದು ಜಮಾಲ್ ಸಿದ್ಧಿಖಿ ತಿಳಿಸಿದರು.
ಮೋದಿಯವರಿಗೆ ಶುಕ್ರಿಯಾ ಭಾಯ್ ಜಾನ್ ಅಭಿಯಾನ ಈಗಾಗಲೇ ಚಾಲನೆ ಪಡೆದಿದ್ದು, ರಾಜ್ಯದಲ್ಲೂ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮೋದಿಯವರಿಗೆ ಮುಸ್ಲಿಮ್ ಮಹಿಳೆಯರ ಸಹಿಯುಳ್ಳ ಅಭಿನಂದನಾ ಪತ್ರಗಳನ್ನು ಆಯಾ ಜಿಲ್ಲಾಧಿಕಾರಿಗಳ ಮೂಲಕ ರವಾನಿಸುವುದು ಈ ಅಭಿಯಾನದ ಉದ್ದೇಶ.
ತ್ರಿವಳಿ ತಲಾಖ್ ರದ್ದುಪಡಿಸಿರುವುದು ಮುಸ್ಲಿಮ್ ಮಹಿಳೆಯರನ್ನು ಸಬಲಗೊಳಿಸಿದೆ. ಜತೆಗೆ ಸಾಮಾಜಿಕ, ಆರ್ಥಿಕ ಬಲವರ್ಧನೆಗೆ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.
ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಮೋದಿ ಅಕ್ಷರಶಃ ಪಾಲಿಸಿದ್ದಾರೆ. ಇದನ್ನು ಪ್ರತಿಯೊಬ್ಬರಿಗೆ ತಲುಪಿಸಲು, ಯೋಜನೆಗಳ ಲಾಭ ದೊರಕಿಸಲು ಸಬ್ ಕಾ ಪ್ರಯಾಸ್ ಅಗತ್ಯವಾಗಿದೆ ಎಂದರು.
ಲೋಕಸಭೆ ಚುನಾವಣೆ ತಯಾರಿಗಾಗಿ ದಕ್ಷಿಣಭಾರತದ ರಾಜ್ಯಗಳನ್ನು ಒಳಗೊಂಡ ಕ್ಲಸ್ಟರ್ ರಚನೆಯಾಗಿದ್ದು, ಈ ಮೂಲಕ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯತತ್ಪರವಾಗಲಿದೆ.
ಸಂಘಟನೆ ಬಲವರ್ಧನೆ, ಚುನಾವಣಾ ಕಾರ್ಯತಂತ್ರ, ಮೋದಿಯವರ ಯೋಜನೆ, ಸಾಧನೆ ಮತ್ತು ವಿಶೇಷ ಕೊಡುಗೆಗಳ ಕುರಿತು ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಅಲ್ಲದೆ, ಚಾಲ್ತಿಯಲ್ಲಿರುವ ವಿಕಸಿತ ಭಾರತ ಸಂಕಲ್ಪಯಾತ್ರೆಗೆ ಇನ್ನಷ್ಟು ಬಲ ತುಂಬಲು ಅಗತ್ಯವಿರುವ ಕಾರ್ಯಚಟುವಟಿಕೆಗಳನ್ನು ಮೋರ್ಚಾ ಹಮ್ಮಿಕೊಳ್ಳಲಿದೆ.
ಜಾತಿ, ಮತ, ಪಂಥದ ಆಧಾರದಲ್ಲಿ ಬಿಜೆಪಿ ಟಿಕೆಟ್ ನೀಡುವುದಿಲ್ಲ. ಸಮೀಕ್ಷಾ ವರದಿ ಆಧರಿಸಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಅಲ್ಪಸಂಖ್ಯಾತರ ಕೋಟ ಅಥವಾ ಇನ್ನಾವುದೇ ಕೋಟಾಗಳು ಇರುವುದಿಲ್ಲ ಎಂದು ಜಮಾಲ್ ಸಿದ್ಧಿಖಿ ಉತ್ತರಿಸಿದರು.