

ಕೋಲಾರ: ಕಾಂಗ್ರೆಸ್ನ ಹಿರಿಯ ರಾಜಕಾರಣಿ ಕೆ.ಆರ್.ರಮೇಶ್ಕುಮಾರ್ ಅವರು 'ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಸಕ್ರಿಯ ರಾಜಕಾರಣದಿಂದ ಗೌರವಯುತವಾಗಿ ನಿವೃತ್ತಿ ಪಡೆಯುವೆ' ಎಂದು ಘೋಷಿಸಿದ್ದಾರೆ.
ಗ್ರಾಪಂ ಚುನಾವಣೆ ಸಂಬಂಧ ನಗರ ಹೊರವಲಯದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ನೇತೃತ್ವದಲ್ಲಿ ಸೋಮವಾರ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮೇಶ್ಕುಮಾರ್, ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಹಣ ತೆಗೆದುಕೊಂಡು ರಾಜಕೀಯ ಮಾಡಿಲ್ಲ. ನಾನು ನೇರವಾಗಿ ಮಾತನಾಡುತ್ತೇನೆ. ಯಾರಿಂದಲೂ ದುಡ್ಡು ತೆಗೆದುಕೊಳ್ಳುವುದಿಲ್ಲ. ನನ್ನ ಈ ನಡೆಯೇ ವಿರೋಧಿಗಳ ಕೋಪಕ್ಕೆ ಕಾರಣ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಕಾಂಗ್ರೆಸ್ನಲ್ಲಿದ್ದ ಕೆಲವರು ಹಣಕ್ಕಾಗಿ ತಮ್ಮ ತಲೆ ಮಾರಿಕೊಂಡು ಹೋದರು. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದರು. ಅಧಿಕಾರದಾಸೆಗೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಜನರಿಂದ ಆಯ್ಕೆಯಾದ ನಾನು ಜನರಿಗಷ್ಟೇ ತಲೆ ಬಾಗುವೆ ಎಂದ ರಮೇಶ್ ಕುಮಾರ್, ದೇಶದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯಕರ್ತರು ಎದೆಗುಂದಬಾರದು. ಯಾರೊಬ್ಬರೂ ಪಕ್ಷಕ್ಕೆ ದ್ರೋಹ ಮಾಡಬಾರದು. ಕಾರ್ಯಕರ್ತರಲ್ಲಿ ಸಣ್ಣ ವ್ಯತ್ಯಾಸವಾದರೂ ಪಕ್ಷದ ಜತೆಗೆ ನಾವೂ ನಾಶವಾಗುತ್ತೇವೆ. ಸಣ್ಣ-ಪುಟ್ಟ ಮನಸ್ತಾಪವನ್ನು ದೊಡ್ಡದು ಮಾಡಿ ವಿರೊಧಿಗಳ ಜತೆಗೆ ಕೈಜೋಡಿಸುವ ಹಂತಕ್ಕೆ ಯಾವುದೇ ಕಾರಣಕ್ಕೂ ಹೋಗಬೇಡಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಪ್ರಗತಿ ಕುಂಠಿತಗೊಂಡಿದೆ. ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಂದೆ ಹೋಗಿಲ್ಲ. ಇಷ್ಟೊತ್ತಿಗಾಗಲೇ ಕೆ.ಸಿ.ವ್ಯಾಲಿ ಯೋಜನೆಯಿಂದ ಜಿಲ್ಲೆಯ ಹಲವು ಕೆರೆಗಳು ತುಂಬಬೇಕಿತ್ತು. ಆದರೆ ನರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ನೀರಿನ ಹರಿವು ಹೆಚ್ಚಿಸುವಂತೆ ಸರ್ಕಾರದ ಮೇಲೆ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಡ ಹಾಕುತ್ತಿಲ್ಲ ಎಂದರು.
ಇನ್ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ರಮೇಶ್ ಕುಮಾರ್, ಪಕ್ಷದ ಋಣ ತೀರಿಸಲು ಮತ್ತು ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದು ಕರೆ ನೀಡಿದರು.