Peddi Review - ಸಮಸ್ಯೆಗಳಿಗೆ ಸಾಧನೆಯ ಉತ್ತರ, ಇದು "ಪೆದ್ದಿ' ಪರಿಹಾರ

ಪೆದ್ದಿ ವಿಮರ್ಶೆ
ಪೆದ್ದಿ ವಿಮರ್ಶೆ
Published on
Peddi Review -
ಚಿತ್ರ: ಪೆದ್ದಿ
ನಿರ್ದೇಶನ: ಬುಚ್ಚಿ ಬಾಬು ಸನಾ
ತಾರಾಗಣ: ರಾಮಚರಣ್​ ತೇಜ, ಶಿವರಾಜಕುಮಾರ್​, ಜಾಹ್ನವಿ ಕಪೂರ್​, ಜಗಪತಿ ಬಾಬು, ರವಿಕಿಶನ್​, ದಿವ್ಯೇಂದು ಶರ್ಮಾ ಮತ್ತಿತರರು
ಭಾರತದಲ್ಲಿ 12 ಸಾವಿರಕ್ಕೂ ಅಧಿಕ ಹೆಸರೇ ಇಲ್ಲದ ಹಳ್ಳಿಗಳಿವೆಯಂತೆ. ಅಂತಹ ಒಂದು ಅಡ್ರೆಸ್​ ಇಲ್ಲದ ಕುಗ್ರಾಮದ, ಗುರತೇ ಇಲ್ಲದ ಯುವಕ ತನ್ನ ಹಾಗೂ ತನ್ನೂರಿನ ಗುರುತಿಗಾಗಿ ಹೋರಾಡುವ ಕಥೆ "ಪೆದ್ದಿ'. "ಉಪ್ಪೇನಾ' ಮೂಲಕ ಚೊಚ್ಚಲ ನಿರ್ದೇಶನದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಬುಚ್ಚಿ ಬಾಬು ಸನಾ, ಅದಾಗಿ ಐದು ವರ್ಷಗಳ ಬಳಿಕ ಆ್ಯಕ್ಷನ್​&ಕಟ್​ ಹೇಳಿರುವ ಚಿತ್ರವಿದು. ಹಾಗೇ ರಾಜಮೌಳಿ ಸೃಷ್ಟಿಸಿದ್ದ "ಆರ್​ಆರ್​ಆರ್​' ಪ್ರಪಂಚಕ್ಕೆ ಕರೆದೊಯ್ದಿದ್ದ ನಟ ರಾಮಚರಣ್​ ತೇಜಾ, "ಪೆದ್ದಿ' ಚಿತ್ರದಲ್ಲಿ ನಿಜಕ್ಕೂ "ಗೇಮ್​ ಚೇಂಜರ್​' ಆಗಿದ್ದಾರೆ. ಏಕೆಂದರೆ, ಇಲ್ಲಿ ಅವರು ಇನ್ನೊಂದು ಹೊಸ ಪ್ರಪಂಚವನ್ನು ಪರಿಚಯಿಸಿದ್ದಾರೆ. ಹಾಗಾದರೆ ಹೇಗಿದೆ "ಪೆದ್ದಿ'?
2016ರ ಒಲಿಂಪಿಕ್ಸ್​ನಲ್ಲಿ ಭಾರತ ಎರಡು ಪದಕ ಪಡೆದ ಸಂಭ್ರಮ ಅಧಿಕಾರಿಗಳದ್ದು. ಆದರೆ, ಕ್ರೀಡಾ ಸಚಿವರಿಗೆ 130 ಕೋಟಿ ಜನಸಂಖ್ಯೆಯಿರುವ ದೇಶಕ್ಕೆ ಎರಡೇ ಪದಕ ಎಂಬ ಬೇಸರ. ಹೀಗಾಗಿ ಹೊಸ ಪ್ರತಿಭೆಗಳನ್ನು ಹುಡುಕಲು ಹೊರಡುವ ಕ್ರೀಡಾ ಪ್ರಾಧಿಕಾರದ ಅಧಿಕಾರಿಗೆ (ಬೊಮನ್​ ಇರಾನಿ) ಆಂಧ್ರ ಪ್ರದೇಶದ ವಿಜಯನಗರಂನ ಕ್ರೀಡಾ ಜಾತ್ರೆಗೆ ತೆರಳುತ್ತಾನೆ. ಅಲ್ಲಿ ಕ್ರಿಕೆಟ್​, ಕುಸ್ತಿ, ಓಟ... ಹೀಗೆ ಯಾವ ಕ್ರೀಡಾಪಟುವನ್ನು ಕರೆದು ಕೇಳಿದರೂ ಎಲ್ಲರಿಗೂ "ಪೆದ್ದಿ'ಯೇ ೇವರಿಟ್​. ಹಾಗಾದರೆ, ಯಾರಾತ? ಎಂದು ಹುಡುಕುತ್ತಾ ಹೆಸರೇ ಇಲ್ಲ ಬೆಟ್ಟದ ಕೆಳಗಿನ ಊರಿಗೆ ಹೊರಡುತ್ತಾನೆ. ರೈಲಿನಲ್ಲಿ ಅರ್ಧ ಗಂಟೆಗೆ ತಲುಪಬಹುದಾದ ಊರದು. ಆದರೆ, ನಿಲ್ದಾಣವಿಲ್ಲದ ಕಾರಣ, ಒಂದು ದಿನ ಪೂರ್ತಿ ಬೆಟ್ಟ, ಗುಡ್ಡ ಹತ್ತಿಳಿದು ನಡೆಯಬೇಕಾದ ದುಸ್ಥಿತಿ. ಆ ಪೆದ್ದಿಯದು ಬೆಲ್ಲದ ಕಾರ್ಖಾನೆಯಲ್ಲಿ ಕೆಲಸ. "ಏನೇ ಇದ್ದರೂ, ಎಷ್ಟೇ ಕಷ್ಟವಾದರೂ, ಭೂಮಿ ಮೇಲಿದ್ದಾಗಲೇ ಮಾಡಿಬಿಡಬೇಕು. ಮತ್ತೆ ಹುಟ್ಟುತ್ತೀವೋ ಹೇಗೆ?' ಅಂತ ನಂಬುವವನು. ಕೆಲಸದ ಕೂಲಿಯಂತೆಯೇ ಆತ ಆಟಕ್ಕೂ ಕೂಲಿ. ಹರಾಜು ಕೂಗಿ ತಂಡಕ್ಕೆ ಸೇರಿಸಿಕೊಂಡು ಆಡಿಸುವಷ್ಟು ಅದ್ಭುತ ಬ್ಯಾಟರ್​ ಪೆದ್ದಿ. ಇಂತಹ ಪೆದ್ದಿಗೆ ಮೈದಾನದಲ್ಲಿ ಅವಮಾನವಾಗುವ ಕಾರಣ ಸೀದಾ ಗರಡಿ ಮನೆಗೆ ಬರುತ್ತಾನೆ. ಗೌರ್​ನಾಯ್ಡು (ಶಿವಣ್ಣ) ಬಳಿ ಕುಸ್ತಿ ತರಬೇತಿ ಪಡೆಯುತ್ತಾನೆ. ಅದೇ ಸಮಯದಲ್ಲಿ ಊರಿಗೆ ರೈಲ್ವೆ ಸ್ಟೇಷನ್​ ಬೇಕೆಂದು ಓಡಾಡುವ ಆತನಿಗೆ ಊರಿಗೆ, ತನಗೆ ಗುರುತಿದ್ದರಷ್ಟೇ ಸಮಾಜ, ಸರ್ಕಾರ ಗುರುತಿಸುವುದು ಅಂತ ಗೊತ್ತಾಗಿ, ಗುರುತಿಗಾಗಿ ಹೋರಾಟಕ್ಕಿಳಿಯುತ್ತಾನೆ. ಆ ರೋಚಕ ಹೋರಾಟವೇ "ಪೆದ್ದಿ'.
"ಪೆದ್ದಿ'ಯ ಪ್ರಮುಖ ಹೈಲೈಟ್​ ನಾಯಕ ರಾಮಚರಣ್​ ತೇಜ. ಕ್ರಿಕೆಟರ್​, ಕುಸ್ತಿಪಟು, ಕ್ರೀಡಾಪಟು... ಹೀಗೆ ಮೂರ್ನಾಲ್ಕು ಲುಕ್​ಗಳಲ್ಲಿ ಗಮನ ಸೆಳೆಯುತ್ತಾರೆ. ಕ್ಲೆಮ್ಯಾಕ್ಸ್​ ಮೋನೋಲಾಗ್​ ಕೂಡ ಚಿತ್ರದ ಕೇಂದ್ರಬಿಂದು. ಹಾಡುಗಳು ಈಗಾಗಲೇ ವೈರಲ್​ ಆಗಿದ್ದು, ಎ.ಆರ್​.ರೆಹ್ಮಾನ್​ ಹಿನ್ನೆಲೆ ಸಂಗೀತ ಆಕರ್ಷಕವಾಗಿದೆ. ಗ್ರಾಮೀಣ ಸೊಗಡಿನ ಕಥೆಯನ್ನು ಛಾಯಾಗ್ರಾಹಕ ರತ್ನವೇಲು ಅಂದವಾಗಿ ತೆರೆಗೆ ತಂದಿದ್ದಾರೆ. ಇನ್ನು ರಾಮಚರಣ್​ ಮತ್ತು ಶಿವಣ್ಣ ಕನ್ನಡದಲ್ಲೂ ಡಬ್ಬಿಂಗ್​ ಮಾಡಿರುವುದು ಪ್ಲಸ್​ ಪಾಯಿಂಟ್​. ಹಾಗಂತ ಚಿತ್ರದಲ್ಲಿ ಏನೂ ನೆಗೆಟಿವ್​ ಇಲ್ಲ ಅಂತಲ್ಲ. ಸ್ಪೋರ್ಟ್ಸ್​ ಆ್ಯಕ್ಷನ್​ ಡ್ರಾಮಾ ಜಾನರ್​ ಕಥೆಗೆ ಬುಚ್ಚಿ ಬಾಬು ಸನಾ ಬರೋಬ್ಬರಿ 189 ನಿಮಿಷಗಳ ಸಿನಿಮಾ ರೂಪ ನೀಡಿದ್ದು, ಕೆಲವೆಡೆ ಸುದೀರ್ಘವೆನಿಸುತ್ತದೆ. ರೈಲಿನ ವಿಎಫ್​ಎಕ್ಸ್​​ ಬಹುತೇಕ ಕಡೆಗಳಲ್ಲಿ ಕೃತಕ ಎನ್ನಿಸುತ್ತದೆ. ನಾಯಕಿ ಜಾಹ್ನವಿ ಕಪೂರ್​ರನ್ನು ಕೇವಲ ಮಸಾಲಾ ಸೇರಿಸಲು ಬಳಸಿಕೊಂಡಂತಿದೆ. ಹೆಣ್ಣನ್ನು ಭೋಗದ ವಸ್ತುವಿನಂತೆ ತೋರಿಸಿರುವುದು ಅಸಮಾಧಾನಕ್ಕೆ ಕಾರಣವಾಗಬಹುದು. ಅಂತಹ ನಕಾರಾತ್ಮಕ ವಿಷಯಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ, "ಪೆದ್ದಿ' ಒಂದೊಳ್ಳೆ ಸಾಮಾಜಿಕ ಬದಲಾವಣೆಗೆ ನಾಂದಿಯಾಗುವ ಸಿನಿಮಾ ಅಂದರೂ ತಪ್ಪಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net